ಟಿಪ್ಪು ಸುಲ್ತಾನ್ ಕಟ್ಟಿಸಿದ ಮಂಜ್ರಾಬಾದ್ ಕೋಟೆ



ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ಅಂತರದಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅಡಾಣಿ ಗುಡ್ಡದ ಮೇಲೆ ಈ ಕೋಟೆ ರಚಿತಗೊಂಡಿದೆ.


 ಸಮುದ್ರಮಟ್ಟದಿಂದ ಈ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಅಂದರೆ 3393 ಅಡಿಗಳು 252 ಮೆಟ್ಟಿಲುಗಳನ್ನು ಏರಿದರೆ ಸಿಗುವ ಈ ಕೋಟೆಯು ನಕ್ಷತ್ರಾಕಾರದ ರಚನೆಯ ವಿಶಿಷ್ಟ ತಂತ್ರವನ್ನೊಳಗೊಂಡ “ಕಡೆಗಾಪು”ಮತ್ತು“ಗಿರಿದುರ್ಗ”ವಾಗಿದೆ.
ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು 1956ರ ಪುರಾತತ್ವ ಇಲಾಖೆಯ ನಿಯಮದಂತೆ ವಹಿಸಿಕೊಂಡಿದ್ದು ಸೂಕ್ತ ರಕ್ಷಣೆ ನೀಡಿ, ಪರಿಣಿತ ಮಾರ್ಗದರ್ಶಿಗಳ ನೇಮಕಾತಿ ಮಾಡಿದ್ದರೆ ಇಡೀ ಜಿಲ್ಲೆಯಲ್ಲಿಯೇ ಶ್ರೇಷ್ಠವಾದ ಸ್ಮಾರಕಗಳಲ್ಲೊಂದಾಗುತಿತ್ತು. ವಿಶೇಷವಾದ ದುರ್ಗ ರಚನಾ ತಂತ್ರ, ಶೈಲಿಯನ್ನು ಹೊಂದಿರುವ ಈ ಕೋಟೆಯು ಶೇಕಡ 60  ಭಾಗ ಮಾತ್ರ ಭದ್ರವಾಗಿ ಉಳಿದು, ಭೀಮಬಲವನ್ನು ಕಾಪಾಡಿಕೊಂಡು ಬಂದಿದೆ.

ಮೈಸೂರಿನ ಹುಲಿ ಟಿಪ್ಪು ಸುಲ್ತಾನರು ಪ್ರಾಯಶಃ ಕ್ರಿ.ಶ.1785ರಲ್ಲಿ ಕೋಟೆಯ ನಿರ್ಮಾಣವನ್ನು ಪ್ರಾರಂಬಿಸಿ ಮತ್ತೆ ಕೆಲವುದಿನ ನಿಲ್ಲಿಸಿ ಕ್ರಿ.ಶ.1792ರಲ್ಲಿ ಪೂರ್ಣ ನಿರ್ಮಾಣ ಮಾಡಿದರೆಂದು ದಾಖಲೆಗಳು ತಿಳಿಸುತ್ತವೆ. ಪ್ರಾಯಶಃ ಟಿಪ್ಪು ಸುಲ್ತಾನ್ ಸಂಪೂರ್ಣವಾಗಿ ಕಲಾತ್ಮಕವಾಗಿ ಕಟ್ಟಲ್ಪಟ್ಟ ಈ ಕೋಟೆಯ ಮೇಲೆ ನಿಂತು ಮಂಜ್ರಾಬಾದ್ ಕೋಟೆ ಎಂದು ನಾಮಕರಣಮಾಡಿರಬಹುದು. ಈ ಮಂಜ್ರಾಬಾದ್ ಎಂಬ ಶಬ್ದವು ಹಲವು ರಮ್ಯ ಅರ್ಥಗಳನೊಳಗೊಂಡಿದ್ದನ್ನು ಕಾಣಬಹುದಾಗಿದೆ.
(ಇದರ ವಿವರಗಳನ್ನು ಮುಂದೆ ತಿಳಿಸಲಾಗಿದೆ.)

ಕಡೆಗಾಪು:  ಕಡೆಗಾಪು ಎಂದರೆ ಕೊನೆಯ ರಕ್ಷಣೆ ಎಂದಾಗುತ್ತದೆ. ರಾಜಧಾನಿಯ ಮೇಲೆ ದಂಡೆತ್ತಿ ಯಾರಾದರು ವೈರಿಗಳು ಬಂದಾಗ ಗುಪ್ತವಾಗಿ ಕೊನೆಯ ರಕ್ಷಣೆಗಾಗಿ ತನ್ನೆಲ್ಲ ಅಮೂಲ್ಯವಾದ ಚರಾಸ್ತಿಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ರೂಢಿಯು ಇತಿಹಾಸದುದ್ದಕ್ಕೂ ರಾಜ ಮಹರಾಜರು ನಡೆಸಿಕೊಂಡು ಬಂದಿದ್ದನ್ನು ಕಾಣುತ್ತೇವೆ. ಅಂತಹ ರಕ್ಷಣೆಗಾಗಿ ಮಾಡಿಕೊಂಡ ಟಿಪ್ಪುವಿನ ಅಮೂಲ್ಯವಾದ ಕೋಟೆಯೇ ಈ ಮಂಜ್ರಾಬಾದ್ ಕೋಟೆ ಆಗಿರುತ್ತದೆಂದು ಹೇಳಲಾಗಿದೆ.

ಕೋಟೆಗಳ ರಚನಾ ಶಾಸ್ತ್ರದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು ಭೂದುರ್ಗ, ಜಲದುರ್ಗ, ವನದುರ್ಗ, ಗಿರಿದುರ್ಗಗಳೆಂದು ಕರೆಯಲಾಗುತ್ತಿದೆ. ಭೂವಲಯದಲ್ಲಿ ಜಲಸಂಪನ್ಮೂಲಗಳ ನಡುವೆ ಕಟ್ಟಲ್ಪಟ್ಟ ಕೋಟೆಗಳನ್ನು ಜಲÀದುರ್ಗಗಳೆಂದು ಕರೆದರೆ, ಬೆಟ್ಟ ಅಥವಾ ಗುಡ್ಡಗಳ ಮೇಲೆ ಕಟ್ಟಲ್ಪಟ್ಟ ಕೋಟೆಗಳಿಗೆ ಗಿರಿದುರ್ಗವೆಂದು ಕರೆಯಲಾಗುತ್ತದೆ. ದುರ್ಗವೆಂದರೆ ಇಲ್ಲಿ ಕೋಟೆ ಎಂದರ್ಥ. ಮಂಜ್ರಾಬಾದ್ ಕೋಟೆಯೂ ಸಹ ಗಿರಿಯೊಂದರ (ಗುಡ್ಡದ) ಮೇಲೆ ಕಟ್ಟಿದ (ನಿರ್ಮಿಸಿದ) ದುರ್ಗವಾಗಿದೆ. ಶ್ರೀರಂಗಪಟ್ಟಣದ ಕೋಟೆಯು ಜಲದುರ್ಗವಾದರೆ ಐಗೂರಿನ ಕೋಟೆಯು ವನದುರ್ಗವಾಗಿದೆ.

ಈ ಸ್ಥಳದಲ್ಲಿ  ಮಂಜ್ರಾಬಾದ್  ಕೋಟೆ ನಿರ್ಮಿಸಲು  ಕಾರಣಗಳು:

1) ಆಂಗ್ಲರ, ನಿಜಾಮರ, ಮರಾಠರ ದಾಳಿಯನ್ನು ತಡೆಯಲು ಈ ಸ್ಥಳವು ಬಹು ಆಯಕಟ್ಟಿನ ಸ್ಥಳವಾಗಿತ್ತು.

2) ಹೈದರಾಲಿ, ಟಿಪ್ಪುಸುಲ್ತಾನರು ಮಂಗಳೂರು ಬಂದರನ್ನು ನೌಕಾ ನೆಲೆಯನ್ನಾಗಿ ಭದ್ರಪಡಿಸಿಕೊಳ್ಳಲು ಇಚ್ಛಿಸಿದ್ದರು. ತಮ್ಮ ಆಳ್ವಿಕೆಯಲ್ಲಿ ಈ ಬಂದರು ಇಂಗ್ಲೀಷರಿಗೂ ಮತು ಹೈದರಾಲಿಗೂ ಹಸ್ತಾಂತರವಾಗುತ್ತಲೇ ಇರುವುದರಿಂದಮಂಗಳೂರು, ಶ್ರೀರಂಗಪಟ್ಟಣಗಳ ನಡುವಿನ ಆಯಕಟ್ಟಿನ ಪ್ರದೇಶದಲ್ಲಿದ್ದ ಈ ಅಡಾಣಿ ಗುಡ್ಡದ ಮೇಲೆ ಟಿಪ್ಪು ಕೋಟೆಯನ್ನು  ಕಟ್ಟಿಸುವುದು  ಅನಿವಾರ್ಯವಾಗಿತ್ತು.

3)ಕ್ರಿ.ಶ.1784ರಲ್ಲಿ ಟಿಪ್ಪು ಬ್ರಿಟೀಷರನ್ನು ಎದುರಿಸಿದಾಗ ಈ ಮಂಗಳೂರು ಬಂದರು ತೀರ ಸಂಪರ್ಕ ಮಾಧ್ಯಮದ ಸ್ಥಳವಾಯಿತು. ಆಗಾಗ ಮಂಗಳೂರಿಗೆ ಹೋಗಿಬರುತಿದ್ದ ಟಿಪ್ಪು ಬೆಳ್ತಂಗಡಿಯಿಂದ ಮುಂದೆ ಬಂದು ಭಲಂ(ಈಗಿನ ಐಗೂರು) ನಲ್ಲಿ ತಂಗುತಿದ್ದರು. ಈ ಸ್ಥಳ ಹಲವು ಬದ್ರತೆಗೆ ಪ್ರಮುಖವಾದದ್ದು ಎಂದುಅರಿವಾಗಿಇವರು ಇಲ್ಲಿಯೇ ಕೋಟೆಯನ್ನು ನಿರ್ಮಿಸಬೇಕೆಂದು ಸಂಕಲ್ಪಮಾಡಿದರು.

4)ಟಿಪ್ಪು ಮುಖ್ಯವಾಗಿ ಸೌಂದರ್ಯೋಪಾಸಕನಾಗಿದ್ದು, ಈ ಸ್ಥಳದ ಮೇಲೆ ನಿಂತು ಕಣ್ಣಿನ ಬಿಂಬವನ್ನು ಸುತ್ತಲೂ ಹಾಯಿಸಿದಾಗ ಕಂಡ ಉಪಮಾತೀತ ಬೆರಗನ್ನು ಸವಿದು ಇಲ್ಲಿ ಕೋಟೆಯನ್ನು ಕಟ್ಟಿಸಲು  ನಿರ್ಧರಿಸಿ ನಂತರ , ವಿಶಿಷ್ಟ ಸೌಂದರ್ಯಸ್ಮಾರಕವನ್ನು ಅಷ್ಟಕೋನಾಕೃತಿಯಲ್ಲಿ ನಿರ್ಮಿಸಿದನು. ಟಿಪ್ಪು ಕಟ್ಟಿಸಿದ ಜಮಲಾಬಾದ್, ಬೆಂಗಳೂರು, ದಿಂಡಗಲ್ ಮುಂತಾದ ಕೋಟೆಗಳು ಈ ಕೋಟೆಯಷ್ಟು ನಿರ್ದಿಷ್ಟವಾದ ಬಿಂದುವಿನಲ್ಲಿ ಕರಾರುವಾಕ್ಕಾಗಿ ಕಟ್ಟಿಸಿದವುಗಳಾಗಿಲ್ಲ. ಅಲ್ಲಿ ಭದ್ರತೆಯಿಂದಲೂ, ವಿಶಿಷ್ಟ ಶೈಲಿಯಿಂದಲೂ, ಅಷ್ಟಕೋನಾಕೃತಿ ಅಲಂಕರಣಗಳಿಂದಲೂ ಕೂಡಿರಬಹುದು.
5)ಟಿಪ್ಪು ಸುಲ್ತಾನನಿಗೂ ಅಂದಿನ ಇಂಗ್ಲೀಷರ ಸೈನ್ಯದ ಜನರಲ್ ಮ್ಯಾಥ್ಯೂಸನಿಗೂ ಹಲವು ಸಲ ಹಣಾಹಣಿ ನಡೆದದ್ದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಕ್ರಿ.ಶ.1783ರಲ್ಲಿ ಟಿಪ್ಪು ಮಂಗಳೂರಿನಲ್ಲಿ ವಿಜಯಿಯಾದ ನಂತರ ಅದೇ ವರ್ಷ ಇಂಗ್ಲೀಷರ ಇನ್ನೊಂದು ಸೈನ್ಯ ಕರ್ನಲ್ ಕ್ಯಾಂಬೆಲ್‍ನ ಕೈಕೆಳಗೆ ಬಂದು ಮಂಗಳೂರನ್ನು ವಶಪಡಿಸಿಕೊಂಡಿರು.
ಟಿಪ್ಪು ದೊಡ್ಡ ಸೈನ್ಯದೊಂದಿಗೆ ಮಂಗಳೂರಿಗೆ ಬಂದು ಯುದ್ದ ನಿರತನಾದ. ಆಗಲು ಆಂಗ್ಲರು ಸೋತುಹೋದರು. ಹೀಗಾಗಿ ಮಂಗಳೂರು ಹೊನ್ನಾವರ ಟಿಪ್ಪು ಸಂಪರ್ಕಕ್ಕೆ ಬಂದವು. ಅಲ್ಲಿಂದ ಟಿಪ್ಪುವಿಗೆ ಅಂತರಾಷ್ಟೀಯ ಸಂಬಂಧವು (ಹಡಗಿನ ಮೂಲಕ) ಮಂಗಳೂರೇ ಪ್ರಮುಖ ಕೇಂದ್ರವಾಯಿತು. ಈ ಸಂದರ್ಭದಲ್ಲಿ ಇಂದಿನ ಕಾಸರಗೋಡು ಜಿಲ್ಲೆಯ ಬೇಕಲ್‍ಕೋಟೆಯು ಪ್ರಬಲ ಆಡಳಿತ ಕೇಂದ್ರವಾಯಿತು.

ಆಗಾಗ ಆಕ್ರಮಣ ಮಾಡಲೆತ್ನಿಸುವ ಆಂಗ್ಲರನ್ನು ಮರ್ದಿಸಲು ಶ್ರೀರಂಗಪಟ್ಟಣ, ಮಂಗಳೂರು ನಡುವೆ ಒಂದು ಸೈನ್ಯವನ್ನು ಇಡುವ ಕೋಟೆಯನ್ನು ಕಟ್ಟಿಸುವುದು ಅನಿವಾರ್ಯವಾಯಿತು. ಬೇಕಲ್‍ಕೋಟೆಯ ವೈಶಿಷ್ಟತೆಯನ್ನು ಮನಗಂಡಿದ್ದ ಟಿಪ್ಪುಸುಲ್ತಾನ್ “ಕಡೆಗಾಪು” ಕೋಟೆಯ ದೃಷ್ಟಿಯಿಂದಲೂ ಕೂಡಸಕಲೇಶಪುರ ಬಳಿ ಇರುವ ಅಡಾಣಿಗುಡ್ಡದ ಮೇಲೆ ವೈಶಿಷ್ಟ ಪೂರ್ಣವಾದ, ಭದ್ರವಾದ ಕಲ್ಲಿನಕೋಟೆಯೊಂದನ್ನು ಕಟ್ಟಿಸಿದ. ಬೇಕಲ್‍ಕೋಟೆಯ ಕೆಲವು ಅಂಶಗಳನ್ನು ಈ ಮಂಜ್ರಾಬಾದ್ ಕೋಟೆಯಲ್ಲಿಯೂ ಕಾಣಬಹುದು.

6)ತೀರ ಆಪತ್ಕಾಲದಲ್ಲಿ ನಿಬಿಡವಾದ ಅರಣ್ಯದಿಂದ ಆಚ್ಛಾದಿತವಾಗಿದ್ದ ಈ ಕೋಟೆಯಲ್ಲಿ ಉಳಿದುಕೊಳ್ಳಲಿಕ್ಕಾಗಿ ಅಥವಾ ಚರಾಸ್ತಿಗಳನ್ನು ರಕ್ಷಿಸಿಕೊಳ್ಳುವ ಕಾರಣವೂ ಕೂಡ ಈ ಕೋಟೆಯ ನಿರ್ಮಾಣದ ಉದ್ದೇಶವಾಗಿತ್ತೆಂದು ತೋರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಸ್ಪೂರ್ತಿಗೊಂಡ ಟಿಪ್ಪು ಸುಲ್ತಾನರು ಬಹುಶಃ ಉಪಯೋಗಿ ಆಗಬಲ್ಲ ಕೋಟೆಯ ನಿರ್ಮಾಣ ಮಾಡಿದರು. “ಮಂಜ್ರಾಬಾದ್” ಎಂಬಹೆಸರಿನನಾಮಕರಣದ ಬಗ್ಗೆಯು ಹಲವಾರು ಅರ್ಥಗಳನ್ನು ಪೌರಾಣಿಕ ಕಾಲದಿಂದಲೂ ಕೊಡಬಹುದಾಗಿದೆ.

ಪರಿಸರದ ವಾಸ್ತವಿಕತೆಗೆ ಒತ್ತುಕೊಟ್ಟು ಸ್ಥಳೀಯ ಜನಾಭಿಪ್ರಾಯದ ಮೇರೆಗೆ ಹೆಸರನ್ನಿಡಲಾಯಿತೆಂದು ಪರಂಪರೆಯಿಂದ ತಿಳಿದುಬರುತ್ತದೆ. 200ವರ್ಷಗಳ ನಂತರವು ಈ ಕೋಟೆಗೆ ಮಾತ್ರವಲ್ಲ; ಇಡೀ ತಾಲ್ಲೂಕಿಗೆ “ಮಂಜ್ರಾಬಾದ್” ಎಂಬಹೆಸರು ದಾಖಲೆಗೊಂಡಿತ್ತು.

ತಾಲ್ಲೂಕುಗಳ ವಿಂಗಡಣಾ ಸಮಯದವರೆಗೂ ಈ ಹೆಸರೇ ಇತ್ತೆಂದರೆ ಇದರಲ್ಲಿ ಜನವಿರೋಧಿ ಸಂಸ್ಕ್ರತಿ ಇರಲಿಲ್ಲವೆಂದೆನಿಸುತ್ತದೆ. ಏಕೆಂದರೆ ಜನವಿರೋಧವಾದ ಯಾವ ಹೆಸರು ಬಹಳ ದಿನ ಬಳಕೆಯಲ್ಲಿ ಇರಲಾರದು. ಈಗಲೂ ಕೂಡ ಸಕಲೇಶಪುರ ತಾ|| ಕಛೇರಿಯ ದ್ವಾರದ ಮೇಲೆ ಮಂಜ್ರಾಬಾದ್ ಎಂಬ ಹೆಸರು ಅಚ್ಚೊತ್ತಿದೆ.

ಪ್ರತಿಷ್ಠಿತವಾದ ಇಲ್ಲಿಯ ಒಂದು ಕ್ಲಬ್‍ಗೂಕೂಡ “ಮಂಜ್ರಾಬಾದ್” ಎಂದೇಪ್ರಾರಂಭದಿಂದ ಈವರೆಗೆ ಕರೆಯಲಾಗುತ್ತದೆ. ಕೆಲವು ಕಡೆ ಇದೇ ಟಿಪ್ಪುವು ಈ ಪರಿಸರದ ಅನೇಕಪ್ರದೇಶಗಳಿಗೆ ಪರ್ಶಿಯನ್‍ ಹೆಸರುಗಳನ್ನು ಇಟ್ಟಿದ್ದ. ಆ ಹೆಸರುಗಳು ಟಿಪ್ಪು ನಂತರ ಬಳಕೆಯಾಗದೇ ಮಾಸಿಹೋದವು. ಉದಾಹರಣೆಗಾಗಿ ಚಿತ್ರದುರ್ಗವನ್ನು ಗೆದ್ದುಕೊಂಡ ನಂತರ ಇದಕ್ಕೆ ಪರೂಖಾಯೂಬ್‍ಸ್ಸಾರ್ ಎಂದು, ಬಳ್ಳಾರಿಗೆ “ಸಮರ್ಪಟ್ಟಣ” ಎಂದು, ಪಾವಗಡಕ್ಕೆ ಖುತುಬ್‍ಮಿನರ್ ಎಂದು, ಸಿರಾಕ್ಕೆ ರುಸ್ತುಮಾಬಾದ್ ಎಂದು, ದೇವರಹಳ್ಳಿಗೆ ಯೂಸೂಪಾಬಾದ್ ಎಂದು ಹೆಸರುಗಳನ್ನು ಮರುನಾಮಕರಣ ಮಾಡಿದ್ದ.
ಜನಾಭಿಪ್ರಾಯ ಮತ್ತು ಪರಿಸರಕ್ಕೆ ಸಂಬಂದಿಸಿದ ಹೆಸರುಗಳು ಇವಾಗಿದ್ದವು. 

ಈ ಎಲ್ಲಾ ಹೆಸರುಗಳು ಟಿಪ್ಪುವಿನ ನಂತರ ಮೂಲ ಹೆಸರಿಗೆ ಮರಳಿದವು. ಆದರೆ ಮಂಜ್ರಾಬಾದ್ ಎಂಬ ಹೆಸರಿನಲ್ಲಿ ಅಂತರ್ಗತವಾದ ಭಾವ ಅರ್ಥವು ಇಲ್ಲಿಯ ಪ್ರಾದೇಶಿಕತೆಗೆ ಪರಿಸರಕ್ಕೆ ತುಂಬ ಅನನ್ಯವಾಗಿದೆ. ಹೀಗಾಗಿ ಈ ಹೆಸರು ಬಹುಕಾಲ ಜನರ ಬಾಯಿಯಲ್ಲಿ ಮತ್ತು ದಾಖಲೆಗಳಲ್ಲಿ ಹಸಿರಾಗಿವೆ. ಇನ್ನೂ ಕೂಡ ಹಳೆ ಕಡತಗಳಲ್ಲಿ ಸಕಲೇಶಪುರ ತಾಲ್ಲೂಕಿಗೆ ಮಂಜ್ರಾಬಾದ್ ಎಂದೇ ನಾಮಕರಣವಾಗಿದೆ. ಹೀಗಾಗಿ ಕೋಟೆಗೆ ಈ ಹೆಸರನ್ನಿಡಲಾಯಿತು ಮತ್ತು   ಶಾಶ್ವತವಾಗಿ ಜನಮನದಲ್ಲಿಯೂಉಳಿಯಿತು.

ಮಂಜ್ರಾಬಾದ್ ಎಂಬ ವಿಶೇಷಾರ್ಥದ ಶಬ್ದವು ತನ್ನ ಪೌರಾಣಿಕ ಕಾಲದವರೆಗೂ ಸಂಬಂಧವನ್ನು ಕಲ್ಪಿಸುವಂತೆ ಮಾಡುತ್ತದೆ. ಈ ಪಧದ ಅರ್ಥವು ಕೆಲವು ಬಗೆಯಲ್ಲಿ ಮಂಜಿನಿಂದ ಆಚ್ಛಾದಿತವಾದ ಪ್ರದೇಶವೆಂದು ತಿಳಿದು ಬರುತ್ತದೆ.

ಸಕಲೇಶಪುರದ ಸನಿಹದಲ್ಲಿರುವ ಪಶ್ಚಿಮ ಘಟ್ಟಗಳ ಶ್ರೇಣಿ ಜಿಂಕೆಗುಡ್ಡ, ಅಡಾಣಿ ಗುಡ್ಡಗಳೆಲ್ಲ ಮಂಜಿನಿಂದ ಆವರಿಸಿರುವ ಪ್ರದೇಶಗಳಾಗಿವೆ ಎಂಬುದು ಸತ್ಯ. ಸ್ಕಂದ ಪುರಾಣದಲ್ಲಿ ಕಾಣಬಹುದಾಗಿದೆ. ಅಂತರ್ಗತವಾದ ಸ್ಥಳೀಯ ಪೌರಾಣಿಕ ಪ್ರದೇಶದಲ್ಲಿ ಅಹಿಮಾವಾನ್ ಛಿ ಅಥವಾ ಹಿಮಶೈಲಿಗಳು ಸಕಲೇಶಪುರದ ಸನಿಹದಲ್ಲಿವೆ. ಈ “ಹಿಮವಾನ್”ಹಿಮಶೈಲವೆಂಬ ಪದಗಳು ಹಿಮಚ್ಛಾದಿತ, ಮಂಜಿನಿಂದ ತುಂಬಿದ (ಶೈಲಗುಡ್ಡ) “The Abad of fog” (ಮಂಜಿನಮನೆ )
ಪರ್ವತಗಳೆಂದೇ ಅರ್ಥವಾಗುತ್ತದೆ. ಹಿಮದಿಂದ ಬೆಳಗಿನ ಸಮಯದಲ್ಲಿ ಆವರಿಸ್ಪಟ್ಟ ಸೌಂದರ್ಯಯುತವಾದ ಈ ಸ್ಥಳವು ಪೌರಾಣಿಕ ಕಾಲದಿಂದಲೂ ಮಂಜರ್+ಅಬಾದ್ ಎಂಬ ಶಬ್ದಗಳನ್ನೇ ಸಂಕೇತಿಸುತ್ತವೆ. ಹೀಗಾಗಿ ಪುರಾಣಕಾಲದಿಂದಲೂ ನೈಸರ್ಗಿಕವಾಗಿಯು ಮಂಜ್ರಾಬಾದ್ ತನ್ನ ಗುಪ್ತಾಂಕಿತ ನಾಮದಿಂದ ಪ್ರಸಿದ್ದವಾಗುತ್ತಲೇ ಬಂದಿದೆ. ಇನ್ನು ಕೆಲವು ಇತಿಹಾಸಕಾರರು ಮಂಜ್ರಾಬಾದ್ ಎಂಬ ಹೆಸರಿನ ಬಗೆಗೆ ವಿಭಿನ್ನ ಅರ್ಥವನ್ನು ಕಲ್ಪಿಸಿಕೊಳ್ಳುತ್ತಾರೆ. ಮಂಜ್ರಾಬಾದ್ ಎನ್ನುವ ಪದವು ಮಂಜುನಾಥಾಬಾದ್ ಎಂಬುದಾಗಿತ್ತು ಎಂದು ಹೇಳುತ್ತಾರೆ.

ಮಂಜುನಾಥಾಬಾದ್ ಎಷ್ಟೇ ತದ್ಭವಗೊಂಡರು ಸಹ ಮಂಜ್ರಾಬಾದ್ ಆಗಲು ಶಕ್ಯವಿಲ್ಲ. ಈ ಹೆಸರು ವ್ಯಕ್ತಿ(ದೈವ) ಸೂಚಕವಾದುದಲ್ಲ ನಿಸರ್ಗಸೂಚಕವಾಗಿ ಜನ್ಯಗೊಂಡ ಪದಸಮುಚ್ಛಯ ಸ್ಥಳನಾಮ ಹಿನ್ನೆಲೆಯಿಂದ  ಈ ಪರಿಸರಕ್ಕೆ ಮಂಜ್ರಾಬಾದ್ ಎಂಬ ನಾಮಧೇಯ ಸೂಕ್ತವಾದುದೆಂದು ತಿಳಿಸುತ್ತದೆ.

ಕೆಲವರು ಈ ಕಾರಣಗಳನ್ನು ಹೀಗೆ ಕೊಡುತ್ತಾರೆ. ಕಾಯಿಲೆ ಬಿದ್ದ ಟಿಪ್ಪುವು (ಬಾಲಕನಾಗಿದ್ದಾಗ) ಗುಣಮುಖವಾಗಲೆಂದು ಮಂಗಳೂರಿನಲ್ಲಿ ಬಿಡಾರ ಹೂಡಿದ್ದ. ಹೈದರಾಲಿಯು ಧರ್ಮಸ್ಥಳದ ಮಂಜುನಾಥೇಶ್ವರನಲ್ಲಿ ಹರಕೆ ಕಟ್ಟಿಕೊಂಡ ನಂತರ ಧಾವಿಸಿ ಶ್ರೀರಂಗಪಟ್ಟಣಕ್ಕೆ ಬರುವಾಗ ಈಗಿನ ಮಂಜ್ರಾಬಾದ್ ಕೋಟೆ ಇರುವ ಅಡಾಣಿ ಗುಡ್ಡದ ಹತ್ತಿರವಿದ್ದಾಗ ದೂತರಿಂದ ಟಿಪ್ಪುವು ಗುಣಮುಖನಾದ ಎಂಬ ಸುವಾರ್ತೆಯನ್ನು ಈ ಸ್ಥಳದಲ್ಲಿ ಕೇಳಿಸಿದಕ್ಕಾಗಿ ತನ್ನ ಮಗ ಗುಣಮುಖವಾದದ್ದು ಶ್ರೀ ಮಂಜುನಾಥೇಶ್ವರನ ಕೃಪೆಯಿಂದ ಎಂಬ ಕಾರಣಕ್ಕಾಗಿ ಈ ಸ್ಥಳದಲ್ಲಿಯೇ ಮಂಜುನಾಥಾಬಾದ್ ಎಂಬ ಕೋಟೆಯನ್ನು ಕಟ್ಟಿಸಿದ. ಈ ಘಟನೆಯು ಕ್ರಿ.ಶ.1763-82ರ ಅವಧಿಯಲ್ಲಿ ನಡೆದದ್ದೆಂದು ಊಹಿಸುತ್ತಾರೆ.

ಈ ಧಾರ್ಮಿಕ ಅಭಿಪ್ರಾಯಗಳಿಗೆ ಯಾವುದೇ ದಾಖಲೆಗಳಿಲ್ಲ. ಹೈದರಾಲಿಯಾಗಲಿ ಟಿಪ್ಪುಆಗಲಿ ಧರ್ಮಸ್ಥಳದ ಮಂಜುನಾಥೇಶ್ವರನ ಭಕ್ತರಾಗಿದ್ದಿರಬಹುದಾದರೂ ಮಂಜುನಾಥಾಬಾದ್ ಎಂಬ ಪದದಲ್ಲಿ “ರಾ”ಪ್ರತ್ಯಯವುಸೇರಲು ಸಾಧ್ಯವಿಲ್ಲ. ಮಂಜರಾಬಾದ್ ಎಂಬ ಪದದಲ್ಲಿಮಂಜರ್+ಅಬಾದ್ ಎಂದು ಪದಗಳನ್ನುಬಿಡಿಸಿ ಅವುಗಳ ಅರ್ಥಮಾಡಿಕೊಳ್ಳುವುದು ಒಳ್ಳೆಯದು. 

ಪರ್ಶಿಯನ್‍ಭಾಷೆಯಲ್ಲಿ ಮಂಜರ್+ಅಬಾದ್=ಮಂಜ್ರಾಬಾದ್ ಎಂಬುವುದು ಮಂಜಿನಿಂದ ಆವೃತವಾದ, ಸೌಂದರ್ಯದ ಹಿನ್ನೆಲೆಯುಳ್ಳ ಸ್ಥಳವೆಂದು ಆಗುತ್ತದೆ. ನಿಸರ್ಗದತ್ತವಾದ ಈ ಸ್ಥಳವು ಕೂಡ ಭೌಗೋಳಿಕ ಹಿನ್ನೆಲೆಯುಳ್ಳ ಪದನಾಮವಾಗಿದೆ.
ಇದರ ಜೊತೆಗೆ ಕ್ರಿ.ಶ.1763-1782ರ ಅವಧಿಯಲ್ಲಿ ಹೈದರಾಲಿಯು ಕೋಟೆಯನ್ನು ಕಟ್ಟಿಸಿದ್ದಾಗಿ ಹೇಳುವುದಕ್ಕೆ ಆಧಾರಗಳಿಲ್ಲ. ಇತಿಹಾಸ ತಜ್ಞರಾದ ಬೆಂಜಮಿನ್‍ಲೂಯಿಸ್, ಹಯವದನರಾವ್ ಮೊದಲಾದವರು ಈ ಕೋಟೆಯನ್ನು ಅನ್ವೇಷಣೆ ಮಾಡುವ ಕಾಲಕ್ಕೆ ಸಿಕ್ಕಿದ್ದ 2 ಪರ್ಶಿಯನ್ ಶಾಸನಗಳ ಆಧಾರದ ಮೇಲೆ ಟಿಪ್ಪುವೇ ಕ್ರಿ.ಶ.1792ರಲ್ಲಿ ಈ ಕೋಟೆಯನ್ನು ಕಟ್ಟಿಸಿದನೆಂದು ರಾಜ್ಯ, ಜಿಲ್ಲಾ ಗೆಜೆಟೇಟ್‍ಯರ್ನಲ್ಲಿ ನಮೂದಿಸಿದರು. ಈ ಶಾಸನಗಳ ಆಧಾರದ ಮೇಲೆ ಟಿಪ್ಪುವೇ ಕ್ರಿ.ಶ.1792ರಲ್ಲಿ ಈ ಕೋಟೆಯನ್ನು ಕಟ್ಟಿಸಿದರೆಂದು ಹೇಳಲಾಗುತ್ತದೆ.ಈ ಶಾಸನಗಳು ಅದೇನೆ ಆದರೂ ಹೈದರ್‍ಗಿಂತಲು ತಂತ್ರಜ್ಞಾನದಲ್ಲಿ, ಕಲಾತ್ಮಕತೆಯಲ್ಲಿ, ಸೌಂದರ್ಯೊಪಾಸನೆಯಲ್ಲಿ ಟಿಪ್ಪುವೇ ನೈಪುಣ್ಯತೆಯನ್ನು ಪಡೆದಿದ್ದ. ಹೀಗಾಗಿ ಹೈದರಾಲಿಯ ಭಕ್ತಿ ಸ್ಮಾರಕವಾಗಿ ಈ ಕೋಟೆಯನ್ನು ಕಟ್ಟಿಸಿರುವುದು ಸಮಂಜಸವಾಗಿ ಕಾಣುವುದಿಲ್ಲ.                                                                   
ಇತಿಹಾಸ ತಜ್ಞರ ವರದಿಗಳಲ್ಲಿ:  ಇತಿಹಾಸ ತಜ್ಞರಾದ ಬಿ.ಎಲ್.ರೈಸ್, ಹಯವದನರಾವ್ ಮತ್ತು ಪ್ರಾಚ್ಯ ಸಂಶೋದನೆ ವರದಿಗಳ ಪ್ರಕಾರ ಟಿಪ್ಪು ಕ್ರಿ.ಶ. 1792ರಲ್ಲಿ ಮಂಜ್ರಾಬಾದ್ ಕೋಟೆಯನ್ನು ನಿರ್ಮಾಣ ಮಾಡಿದರೆಂದು ತಿಳಿದುಬರುತ್ತದೆ. (ಆರ್ಕಿಯಾಲಾಜಿಕಲ್ ವರದಿಯೊಂದರ ಯಥಾನಕಲನ್ನು ಕೊನೆಗೆ ಕೊಡಲಾಗಿದೆ.) ಇಷ್ಟಲ್ಲದೆ ಪ್ರೋ ಶೇಕ್‍ಆಲಿಯವರು, ಡಾ|| ಶ್ರೀವತ್ಸ ಎಸ್. ವಟಿ ಅವರು ಡಾ|| ಮಂಜುನಾಥ್‍ಸಕಲೇಶ್‍ರವರು, ಡಾ|| ಚನ್ನಬಸಪ್ಪಪಾಟೀಲರು ಮೇಲಿನ ಅಭಿಪ್ರಾಯವನ್ನೆ ದೃಡೀಕರಿಸುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಸಕಲೇಶಪುರದ ಬಳಿ ಇರುವ ಮಂಜ್ರಾಬಾದ್ ಕೋಟೆಯು ಟಿಪ್ಪುಸುಲ್ತಾನ್ ನಿಂದ ನಿರ್ಮಾಣವಾಯಿತೆಂದು ಖಚಿತವಾಗಿದೆ.


Manjarabad Four miles to the north of sakleshpur, on a hill commanding the highway leading from Bangalore to mangalore, tippu built a fortress of a rather fanciful shape which he named manjarabad. It covers the top of a mud and laterite hill, about 200 feet high and is very small in dimensions, being about 120 yards in diameter. Its gate is guarded by an outer fort line so that it has an outer,a middle and an inner gateways. A steep ascent leads to the outer gate which has a pointed arch and stone jambs bearing ornamental creeper bands growing out of narrow-necked jugs and bands also of tiger stripes. In the ceiling of this gateway is shown the plan of the fortress with its gates and a round battery in the center. Probably this proposal this proposal was not carried out.Another foliated gate leads into the fort yard in the center of which is a cross-shaped tank and two structures of brick and mortar having steps. In the north-east wall commanding the pathway up the hill are several valuated guard-room equipped with an underground cell and what looks like a latrine. The fort is in the shape of an eight pointed star and the parapet which is thic and about 10 feet wide, is well provided with cannon mouths and musket holes. At the outer corners there are round guard rooms with musket holes. A moat and another wall surround the fortifications. The prospect on all sides and particularly on the south towards the kumaraswami hills, on the north towards the Bababudan and on the west where the road to mangalore winds through the dense vegetation of forest and plantations is most beautiful. To the north half a mile away, is a higher peak from which a battery could perhaps easily command this fort. Perhaps the range of canon in tipu’s days was shorters on it may even be that the fort was built on a hill where water could be stored.

(ಆಕ್ರ್ಯಾಲಾಜಿಕಲ್ ರಿಪೋರ್ಟ್)

ಕೋಟೆ ಎರಡು ಹಂತಗಳಲ್ಲಿ ಏಕೆ ನಿರ್ಮಾಣ ವಾಯಿತು?
ಈ ಕೋಟೆಯನ್ನು ಎರಡು ಹಂತಗಳಲ್ಲಿ ಕಟ್ಟಿಸಿದ ಹಿನ್ನೆಲೆಯಲ್ಲಿ ಜಿಜ್ಞಾಸೆ ತಾಳುವುದು ಸಹಜವಾಗಿದೆ. ಮೇಲುನೋಟಕ್ಕೆ ಎರಡು ಅವದಿಯಲ್ಲಿ ಬಗೆಯಾದ ವಸ್ತುಗಳನ್ನು ಬಳಸಿದ್ದು ಗೋಚರವಾಗುತ್ತದೆ. ಕೆಲವರು ಹೈದರಾಲಿಗಿಂತಲೂ ಮುಂಚೆಯೆ ನಿರ್ಮಾಣವಾಗಿರಬಹುದೆಂದು ಕೆಲವರು, ಹೈದರಾಲಿ ಅರ್ಧ ಕಟ್ಟಿಸಿ ನಂತರ ಟಿಪ್ಪು ಪೂರ್ಣನಿರ್ಮಾಣ ಮಾಡಿರಬಹುದೆಂದು ಊಹಿಸುತ್ತಾರೆ.

ಇನ್ನೊಂದು ಮಾಹಿತಿಯ ಪ್ರಕಾರ ಬಲಂ ನಾಯಕರು(ಐಗೂರು ನಾಯಕರು) ಪ್ರಾಥಮಿಕ ಹಂತದ ಕೋಟೆಯನ್ನು ನಿರ್ಮಿಸಿ, ನಂತರ ಅದಕ್ಕೆ ತಕ್ಕಂತೆ ಮುಂದಿನ ಕೋಟೆಯನ್ನು ಟಿಪ್ಪುಸುಲ್ತಾನ್ ಕಟ್ಟಿಸಿದನೆಂದು ಚಂದನ ದೂರದರ್ಶನದ ಕಾರ್ಯಕ್ರಮದಲ್ಲಿ  ಕರ್ನಾಟಕದ ಕೋಟೆಗಳು ಶೀರ್ಷಿಕೆಯಲ್ಲಿ ಬಿತ್ತರಗೊಂಡಿದೆ. ಆದರೆ ಇಷ್ಟೊಂದು ಶುಭ್ರವಾದ, ವೈಜ್ಞಾನಿಕ ಹಿನ್ನೆಲೆಯುಳ್ಳ ಅಷ್ಟಕೋನಾಕೃತಿಯನ್ನು ಎಲ್ಲಿಯೂ ಅವರು ಕಟ್ಟಿಸಿಲ್ಲವೆಂದು ದಾಖಲೆಗಳುತಿಳಿಸುತ್ತದೆ.ಕೆಳ ºಂತಗಳಲ್ಲಿ ಕಲ್ಲುಗಳನ್ನು ಬಳಸಿ ಕಟ್ಟಿಸಿದ ಮೇಲೆ 8-10-12 ಅಡಿಗಳ ನಿರ್ಮಾಣವು ಇಟ್ಟಿಗೆಗಳನ್ನು ಬಳಸಿ ಕಟ್ಟಲಾಗಿದೆ. ಈ ಎರಡೂ ಹಂತದ ಕಟ್ಟಡದಲ್ಲಿ ಗಾರೆ ಗಚ್ಚುಗಳನ್ನು ಬಳಸಿ ಸುಣ್ಣದ ಲೇಪನಮಾಡಿದ್ದು ಅಲ್ಲಲ್ಲಿ ಕಂಡುಬರುತ್ತದೆ. ಕ್ರಿ.ಶ 1784ರಲ್ಲಿ ಬ್ರಿಟೀಷರನ್ನು ಎದುರಿಸುವಾಗ ಹೆಚ್ಚು ಸಶಕ್ತಗೊಳ್ಳಲು ಜಮಾಲಾಬಾದ್, ಎಂಬ ಕೋಟೆಯನ್ನುಕಟ್ಟಿಸಿರಬಹುದೆಂದು. ಈ ಸಮಯದಲ್ಲೆ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಲು ಆರಂಬಿಸಿರಬೇಕು.

ಒಂದೆರಡು ವರ್ಷಗಳ ಕಾಲ ನಿರ್ಮಾಣಕಾರ್ಯವು ನಡೆದಿರಬಹುದು. ಈ ಸಂದರ್ಭದಲ್ಲಿ ಬ್ರಿಟೀಷರ ದಂಗೆಗಳು ಹೆಚ್ಚಾದವು ಎಂದು ತೋರುತ್ತದೆ. ಸಂಪೂರ್ಣವಾಗಿ ಸಮುದ್ರ ತೀರದಲ್ಲಿ ತಕ್ಷಣ ಒಂದು ಸುಭದ್ರ ಕೋಟೆ ನಿರ್ಮಿಸುವ ಅವಶ್ಯಕತೆ ಬಂದಿರುವುದರಿಂದ ಬೆಳ್ತಂಗಡಿ ಬಳಿಯ ಜಮಾಲಾಬಾದ್ ಎಂಬ ಕೋಟೆಯ ನಿರ್ಮಾಣದ ಕಡೆ ಗಮನ ಹರಿಸಬೇಕಾದ್ದರಿಂದ ಅಡಾಣಿ ಗುಡ್ಡದ ಮೇಲಿನ ಕಲ್ಲಿನಲ್ಲಿ ಕಟ್ಟಿಸುತಿದ್ದ ಕೋಟೆಯು ಅರ್ಧದಲ್ಲಿ ನಿಂತಿರಬಹುದು. ಪ್ರಾಯಶಃ ಬ್ರಿಟೀಷರೋಡನೆ ಹೋರಾಟದಲ್ಲಿ 7-8 ವರ್ಷಕಾಲ ಈ ಕಡೆ ಗಮನಹರಿಸಲಿಲ್ಲವೆಂದು ಕಾಣುತ್ತದೆ. ನಂತರ ಸುಮಾರು 1790ರಲ್ಲಿ ಪುನಃ ಅರ್ಧಕ್ಕೆ ನಿಲ್ಲಿಸಿದ್ದ ಕೋಟೆಯೆಡೆಗೆ ಗಮನ ನೀಡಿ ಪುನರ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿರಬಹುದು

ಶತಮಾನಗಳ ಅಂತರದಲ್ಲಿ ಈ ಕೋಟೆಯು ನಿರ್ಮಾಣವಾಗಿರಬಹುದೆಂದು ಜಿಜ್ಞಾಸೆಗಳಾದವು. ಏನೇ ಆದರೂ ತಂತ್ರಶಾಸ್ತ್ರ  ಮತ್ತು ಇತರೆ ಕಾರಣಗಳಿಂದ ಈ ಬಗೆಯ ಕೋಟೆಯನ್ನು ಟಿಪ್ಪುಸುಲ್ತಾನ್ ಮಾತ್ರ ಕಟ್ಟಿಸಲು ಸಾದ್ಯವಿದೆ ಎಂಬುದು ಇತಿಹಾಸ ತಜ್ಞರ ದಾಖಲೆಗಳಿಂದ ತಿಳಿದುಬರುತ್ತದೆ ಸಂಪೂರ್ಣವಾಗಿಕಟ್ಟಿಸಲಾದ ಕೋಟೆಯ ಮೇಲೆ ನಿಂತು ಸುತ್ತಲಿನ ವಿಸ್ತøತ ಸೌಂದರ್ಯವನ್ನು ಟಿಪ್ಪು ಕಂಡು ಮನಸಾರೆ ಉದ್ಘರಿಸಿದ ಬಗೆ ಸ್ಥಳೀಯ ಕತೆಯೊಂದು ಹೀಗೆ ಹೇಳುತ್ತದೆ. ಒಂದು ದಿನ ಬೆಳಗಿನ ಸಮಯ ಕೋಟೆಯ ಬುರುಜುಗಳನ್ನೇರಿ ಪಶ್ಚಿಮ ದಿಕ್ಕಿನ ಘಟ್ಟ ಶ್ರೇಣಿಯನ್ನು ಸುತ್ತಲಿನ ಪಚ್ಚೆ ಪೈರುಗಳನ್ನು ಹಚ್ಚ ಹಸಿರಿನ ನಿತ್ಯ ವರ್ಣಮಯ ಸಸ್ಯಕಾಶಿಯನ್ನ ವೀಕ್ಷಿಸಿ ಒಂದೆಡೆ ಹಾಲುಕ್ಕಿ ಹರಿಯುವ ಮಂಜಿನ ರಾಶಿ, ಇನ್ನೋದೆಡೆ ಅತ್ಯುಚ್ಚವಾದ ಸೌಂದರ್ಯ ಸಿರಿಯ ಸನ್ನಿಧಿ ಮತ್ತೊಂದೆಡೆ ಮೈದಾನದಂತೆ ಹಾಸಿಕೊಂಡ ಪೈರುಗಳನ್ನು ಕಂಡು ಆಹಾ! ಕಿತುನಾ ಸುಂದರ್ ಹೈ ಮಂಜ್ರಾಬಾದ್ ಎಂದು ಉಧ್ಘರಿಸಿದ. ಅಂದಿನಿಂದಲೆ ಈ ಕೋಟೆಗೆ ಮಂಜ್ರಾಬಾದ್ ಕೋಟೆ ಎಂಬ ಹೆಸರು ನಿತ್ಯ ನಿರಂತರವಾಗಿ ಜನರ ಬಾಯಿಯಿಂದ ಬಾಯಿಗೆ ಹರಿದು ಬಂದಿತು.

ಆತ್ಯಾಧುನಿಕ ವಾಸ್ತು ವಿನ್ಯಾಸ ಪಾಶ್ಚತ್ಯ ಶೈಲಿ:ಕ್ರಿ.ಶ 1696ರಲ್ಲಿ ನಿರ್ಮಾಣಗೊಂಡ ಇಂತಹ ಕೋಟೆಗಳ ಉದಾಹರಣೆಗಳು ನಮಗೆ ದೊರೆಯುತ್ತವೆ. ಭಾರತೀಯ ಕೋಟೆಗಳ ನಿರ್ಮಾಣಗಳಿಗೆ ಪಾಶ್ಚಾತ್ಯ ವಾಸ್ತು ತಜ್ಞರು ಸಹಾಯ ಮಾಡಲಾರಂಬಿಸಿದ ನಂತರವೇ ಈ ಕೋಟೆಯ ನಿರ್ಮಾಣವಾದುದು ಖಚಿತವಾಗಿದೆ.. ಆಗಾಗಲೇ ಜರ್ಮನ್, ಫ್ರೆಂಚ್ ಮತ್ತು ಮುಸ್ಲಿಂ ದೇಶಗಳ ಮಧುರ ಭಾಂದವ್ಯದಲಿದ್ದ ಟಿಪ್ಪು ಸುಲ್ತಾನನು, ಅಲ್ಲಿಯ ಹಲವು ತಂತ್ರಜ್ಞರನ್ನು ಕರೆಯಿಸಿ ಕೋಟೆಯನ್ನು ಐರೋಪ್ಯ ಮಾದರಿಯಲ್ಲಿ ಸ್ಥಾಪಿಸಿದನೆಂದು ಇತಿಹಾಸಕಾರರ ಅಭಿಪ್ರಾಯ. ಹೊರನೋಟಕ್ಕೆ ಈ ಕೋಟೆಯು ಷಡ್ಭುಜಾಕೃತಿಯನ್ನು ಹೊಂದಿದ್ದರೂ ಅಷ್ಟಕೋನಾಕೃತಿಯೇಇದರ ಕೇಂದ್ರ ಬಿಂದುವಾಗಿದೆ.ಇದರ ದ್ವಾರವು 40 ಅಡಿ ಅಗಲ 25ಅಡಿ ಎತ್ತರವಾಗಿದ್ದು ಕಮಾನುದ್ವಾರವನ್ನು ಹೊಂದಿದೆ. ಇದೇ ಒಂದನೇಯ ಬಾಗಿಲು ಮತ್ತು ಪ್ರವೇಶದ್ವಾರವಾಗಿದೆ. ಅಲ್ಲಿಂದ ಮುಂದೆ ತಿರುವುಗಳ ದಾರಿಯಲ್ಲಿ ಸಾಗಿದರೆ ಮತ್ತೊಂದು ದ್ವಾರ ಸಿಗುತ್ತದೆ.ಇಲ್ಲಿ ಕೇವಲ ಕಮಾನು ಅಡಿಪಾಯ ಬಾಗಿಲು ಮುಂತಾದ ಶಿಲಾಕಂಬಗಳನ್ನು ಕಾಣಬಹುದಾಗಿದೆ.

1 ಮತ್ತು 2ನೇ ದ್ವಾರಗಳ ನಡುವೆ ಭದ್ರವಾದ ಪರಿವೀಕ್ಷಣಾ ಕೊಠಡಿಇದೆ. ಅಲ್ಲಿಂದ 40ಅಡಿ ಪಶ್ಚಿಮ ಭಾಗದಲ್ಲಿ ಸಾಗಿದರೆ ದಕ್ಷಿಣ ದಿಕ್ಕಿಗೆ ತಿರುಗುವದಾರಿಯಲ್ಲಿ ಪ್ರಮುಖವಾದ 3ನೇ ದ್ವಾರ ಸಿಗುತ್ತದೆ. 2ನೇ ದ್ವಾರವನ್ನು ದಾಟುವಾಗ ಕೋಟೆಯೊಳಗಿನಿಂದ ನುಸಿಳಿ ಬರಬಹುದಾದ ಒಂದು ಗುಪ್ತ ಮಾರ್ಗವಿದೆ. ಇದು 6 ಅಡಿ ಎತ್ತರ 3ಅಡಿ ಅಗಲವಾದ ಬಾಗಿಲಿನಿಂದ ಹಾಯ್ದು 90ಡಿಗ್ರಿ ಯಲ್ಲಿ ತಿರುಗಿ 60ಅಡಿ ಉದ್ದದ ಗುಪ್ತವಾದ ದಾರಿಯನ್ನುಕಾಣಬಹುದು .ಇದನ್ನು ಆಯ್ದು ಬಂದರೆ   2ನೇ ಕೋಟೆಗೆ ಬರಬಹುದು.
ಉತ್ತರ ದಿಕ್ಕಿನ ಬಾಗಿಲು ಒಳಗಡೆಗೆ ಅಂಟಿಕೊಂಡಂತೆ 15*10 ಅಡಿಗಳ ಕೋಣೆಇದ್ದು ಬಾಗಿಲಿಗೆ ಹಗಳಿ ಹಾಕುವಾಗ 4-6 ಜನ ಸೈನಿಕರು 25ಉದ್ದನೆಯ ತೊಲೆಯನ್ನು ಈ ಕೋಣೆಯೊಳಗೆ ಅಗಳಿಯನ್ನು ಹಾಯ್ದು ಹೋಗಿ ಮುಂದಿನ ದ್ವಾರದ ಕೋಣೆಯೊಳಗೆ ಭದ್ರಗೊಳ್ಳುವ ತಂತ್ರವನ್ನು ಮಾಡಲಾಗಿದೆ.ಛದ್ಮ ವೇಶದಾರಿಗಳು ಯಾರಾದರು ಕೋಟೆಯೋಳಗೆ ಪ್ರವೇಶಗೊಳ್ಳುವಾಗ ಸಿಕ್ಕಿ ಬೀಳುವ ವ್ಯವಸ್ಥೆಗಾಗಿ ಇದನ್ನು ಮಾಡಲಾಗಿದೆ. ಎಂದು ಹೇಳುತ್ತಾರೆ.

ಹೊಸದಾಗಿ ಈ ಕೋಟೆಯೊಳಗೆ ಪ್ರವೇಶಗೊಳ್ಳುವಾಗ ಟಿಪ್ಪು ಸೈನ್ಯದ  ಗುರುತುಳ್ಳ ವ್ಯಕ್ತಿ ಈ ಕೌಂಟರಿನಲ್ಲಿ ತನ್ನ ಗುರುತನ್ನು ತೋರಿಸಿ ಒಳಕ್ಕೆ ಹೋಗಬಹುದಿತ್ತೆನ್ನಿಸುತ್ತದೆ. ಕಲಾ ಕೌಶಲ್ಯದಿಂದಲೂ, ಭದ್ರತೆಯಿಂದ ಸುಂದರ ನಕ್ಷೆಯಿಂದ 3ನೇ ದ್ವಾರವು ಬಹಳ ಕಲಾತ್ಮಕವಾಗಿ ಪ್ರಮುಖವಾಗಿ ಕಂಡುಬರುತ್ತದೆ. 20ಅಡಿ ಎತ್ತರವುಳ್ಳ ಕಮಾನಿನ ಮೇಲೆ ಸುಳುವು ಹೊಳವುಗಳನ್ನು ಮಾಡಲಾಗಿದ್ದು ಹುಲಿಯ ಪಟ್ಟೆಗಳನ್ನು ಕಮಾನಿನ ಮೇಲೆ ಸಿಮೆಂಟ್ ಗಚ್ಚಿನಿಂದ ರೂಪಗೊಳಿಸಲಾಗಿದೆ. ಪ್ರಮುಖವಾದ ಯಾವುದೇ ಚಾರಿತ್ರಿಕ ಸ್ಮಾರಕಗಳಲ್ಲಿ ನುರಿತ ತಜ್ಞರಿಂದ ಸ್ಮಾರಕದ ಮೂಲ ನಕ್ಷೆಯನ್ನು ಕಟ್ಟಡದ ಒಳಗೆ /ಹೊರಗೆ ಬಿಡಿಸಿದ್ದನ್ನು ಕಾಣುತ್ತೇವೆ. ಮೂರನೇ ದ್ವಾರದ ಮೇಲ್ ಗೋಡೆಯು 35ಅಡಿಗಳ ಎತ್ತರವಾಗಿದ್ದು 5ಅಡಿಗಳು ದಪ್ಪವಾಗಿದೆ.

ಈ ಕೋಟೆಗೋಡೆಯ ದಪ್ಪ 10ಅಡಿಯೊಳಗಿದ್ದರೆ 25ಅಡಿಗಳ ಎತ್ತರವಾಗಿದೆ.ಹಿಂಬದಿಯಿಂದ ಈಕೋಟೆಗೋಡೆಯು ಬಹಳ ಕಡಿದಾಗಿ ಮೇಲಕ್ಕೆ ಹೋಗಿದೆ. ಪ್ರತಿಯೋದು ಕೋನಗಳ ಕೇಂದ್ರದಲ್ಲಿ ಒಟ್ಟು 8ಬುರುಜುಗಳಿವೆ, ಪ್ರತಿಯೊಂದು ಬುರುಜಿನಲ್ಲಿ ಕಮಾನಾಕೃತಿಯ ಪ್ರವೇಶದ್ವಾರವಿದ್ದು ಒಳವೃತ್ತ ಸ್ಥಳದಲ್ಲಿ 4ಜನ ನಿಲ್ಲುವಷ್ಟು ಸ್ಥಳವಿದೆ. 

ಕೆಲವು ಕಡೆ ಎರಡುಜನ ಮರೆಯಾಗುವಂತಹ ಗೂಡುಗಳಿವೆ. 8 ಬುರುಜುಗಳಲ್ಲಿ ಈಗಾಗಲೆ 2 ಶಿಥಲಗೊಂಡಿರುವುದನ್ನು ಪುನರ್ ನಿರ್ಮಾಣಮಾಡಲಾಗಿದೆ.ಕೋಣೆಯ ಪಕ್ಕದಲ್ಲಿ ಈ ಹಿಂದೆ ತಿಳಿಸಿದಂತೆ ಧಾನ್ಯ ಸಂಗ್ರಹದ ಕೋಣೆಗಳು ಪುನಃ ಸಿಗುತ್ತದೆ. ಮೊದಲನೆಯದರಲ್ಲಿ ದವಸಗಳನ್ನಿಡುವ ಕೋಣೆಗೆ ಇದು ವಿರುದ್ದ ದಿಕ್ಕಿನಲ್ಲಿದೆ. ಇದರ ನಂತರ ಕುದುರೆಲಾಯಗಳು, ವಿಶ್ರಾಂತಿ ಗೃಹಗಳು ಪಾಕಶಾಲೆಗಳಿವೆ. ಇವೆಲ್ಲ ಕಮಾನುಗಳನ್ನೊಂದಿದೆ. ಇಲ್ಲಿ ಬಿದ್ದ ನೀರು ಹರಿದು ಹೊರಬರಲು ಸಣ್ಣ ಕಾಲುವೆಯೊಂದು ಹೊರಕ್ಕೆಬರುತ್ತದೆ. ಮುಂದೆ ಪೂರ್ವದಿಕ್ಕಿನಲ್ಲಿ 8-10 ಕೋಣೆಗಳನ್ನು ನಿರ್ಮಿಸಬಹುದಾದಷ್ಟು ಸ್ಥಳದಲ್ಲಿ ಅಪೂರ್ಣವಾದ ಕಟ್ಟಡಗಳ ಸುಳಿವುಗಳಿವೆ. ಇವೆಲ್ಲ ನಿರ್ಮಾಣವಾದುದು ಕೇವಲ ಶೇ.60 ಭಾಗದಷ್ಟು ಮಾತ್ರ ಇನ್ನುಳಿದ ಶೇ 40 ಭಾಗ ಕಟ್ಟಿಸಲು ಯೋಚಿಸಿ ಮೊದಲ ಹಂತ ನಿರ್ಮಿಸಿದ ಸಾಕ್ಷಿಗಳು ನಮಗೆ ಗೊಚರವಾಗುತ್ತದೆ.

ಫಿರಂಗಿಗಳನ್ನು ಮೇಲಕ್ಕೆ ಕೊಂಡೊಯ್ಯಲು ಸುಲಭವಾಗಲೆಂದು ಹೀಗೆ ಮಾಡಲಾಗಿದೆ. ಕೋಟೆಯಮೇಲೆ ಅಂಚಿನುದ್ದಕ್ಕು 3ಅಡಿ ಎತ್ತರದ 1 ವರೆ ಅಡಿ ಅಗಲದ ಗೋಡೆಯು ಉತ್ತು ಬಳಸಿದ್ದು 20 ಅಡಿಗೊಮ್ಮೆ ಈ ರೀತಿಯ ಕಿರಿದಾರಿಗಳನ್ನು ಮಾಡಿದ್ದು ಕಡಿದಾದ ಮತ್ತು ಹಿಂದಿನಿಂದ ಏರಲು ಸಾದ್ಯವಿಲ್ಲದಷ್ಟು ಅಪಾಯದಿಂದ ಕೂಡಿವೆ.

ಇವನ್ನು ಒಂದರಪಕ್ಕ ಒಂದನ್ನು ಅಡ್ಡವಾಗಿ ಇಟ್ಟ ಇಟ್ಟಿಗೆಗಳಿಗೆ ಕಾಂಕ್ರೀಟುಹಾಕಿ ಬಿಗಿಗೊಳಿಸಲಾಗಿದೆ. ಪ್ರತಿಯೊಂದು ಈ ರೀತಿ ಮಾದರಿಗಳು ಒಂದುವರೆ ಅಗಲದಿಂದ ಕಡಿದಾಗಿ 4-8-10-12 ಅಡಿಗಳವರೆಗೆ ಕೆಳಮುಖವಾಗಿ ಹೋಗಿವೆ.ಒಟ್ಟು ಕೋಟೆಯ ಕೇಂದ್ರ ಬಿಂದುವಿನಲ್ಲಿ + ಆಕಾರದ 40*40 ಅಡಿಗಳ ಅಳತೆಯ ಕೊಳವಿದ್ದು 40 ಅಡಿಗಳ ಆಳದಿಂದನೀರು ಸಂಗ್ರಹವಾಗುತಿತ್ತು. ಆದ್ದರಿಂದ  ತಳಪಾಯ ಕಾಣುತಿದ್ದು ಇದೀಗ ಸ್ವಚ್ಚಗೊಳಿಸಲಾಗಿದೆ.

ನಾಲ್ಕೂದಿಕ್ಕಿನಲ್ಲಿಯೂ 10ಅಡಿ ಅಗಲವಾದ ಮೆಟ್ಟಿಲುಗಳುಳ್ಳ ದಾರಿಯು 20ಅಡಿಗಳ ಕೆಳಗಿನವರೆಗೂ ಹೋಗಿದೆ. ಈ ಕೊಳದ ಸುತ್ತಲೂ ರಕ್ಷಣಾಗೊಡೆ ಇಲ್ಲದೆ ಮಳೆ ಮತ್ತು ಗಾಳಿಗೆ ಮಣ್ಣು ಮತ್ತು ಕೊಳಕುನೀರು ಈ ಕೊಳಕ್ಕೆ ಬಿದ್ದಿದ್ದರ ಪರಿಣಾಮವಾಗಿ ಕೆಳಗೆ ದುರ್ಗಂಧ ನೀರು, ಗಿಡ ಗಂಟೆಗಳು ಬೆಳೆಯಲು ಅವಕಾಶವಾಗುತ್ತದೆ.

ಈ ತರಹದ ಕೊಳವು ಟಿಪ್ಪು ಕಟ್ಟಿಸಿದ ಯಾವ ಕೋಟೆಯಲ್ಲು ಕಾಣಬರುವುದಿಲ್ಲ. ಈ ಕೋಟೆಯು ಗಿರಿದುರ್ಗವಾದ್ದರಿಂದ ಮೇಲಕ್ಕೆ ನೀರನ್ನು ತರುವ ಸಮಸ್ಯೆಯನ್ನು ನೀಗಲಿಕ್ಕಾಗಿ ಈ ರೀತಿ ಮಾಡಲಾಗಿದೆ. ಕೋಟೆಗೆ ಈ ಕೊಳವು ಭೂಷಣ ಪ್ರಾಯವಾಗಿದೆ. ನಕ್ಷತ್ರಗಳ ಮೂಲೆಯಿಂದ ಸಮಾನಾಂತರವಾಗಿ ಈ ಕೊಳವು 180 ಅಡಿಗಳ ಅಂತರದಲ್ಲಿದೆ.

ಈ ಕೊಳದ ಅನತಿದೂರದಲ್ಲಿ  2ಮದ್ದಿನ ಮನೆಗಳಿವೆ. ಇವುಗಳು ಪಿರಮಿಡ್ ಆಕೃತಿಯನ್ನು ಹೋಲುತಿದ್ದು ಕೋಟೆಯ ಒಳಾಂಗಣದ ಸಮತಟ್ಟದಿಂದ 15ಅಡಿಗಳ ಕೆಳಭಾಗದಲ್ಲಿ 6*15 ಅಡಿಗಳ ಒಂದೊಂದು ಅಂಕಣಗಳಿವೆ.ಭೂಮಿಯಮೇಲೆ 8ಅಡಿ ಎತ್ತರದಲ್ಲಿ ತ್ರಿಕೋನಾಕೃತಿಯನ್ನು ಹೊಂದಿದೆ. ಕೋಟೆಯ ಪೂರ್ವದಿಕ್ಕಿನಲ್ಲಿರುವ 5*3 ಅಡಿಗಳ ಉದ್ದಗಲದ 2 ಮದ್ದಿನ  ಮನೆಗಳಿಗೆ ಚೌಕಾಕಾರದ ಬಾಗಿಲುಗಳಿವೆ.

ಮೆಟ್ಟಿಲುಗಳಿಂದ ದಕ್ಷಿಣದಿಕ್ಕಿಗೆ ಇಳಿದರೆ ಪೂರ್ವ ದಿಕ್ಕಿನಲ್ಲಿ ಕತ್ತಲೆಯಿಂದ ಆವರಿಸಿದ ಕೋಣೆಗಳಿವೆ. ಮೇಲಿನಿಂದ ಬೆಳಕುಹರಿಯಲು ಕಿರಿಕಿಂಡಿಗಳಿದ್ದರು ಅಗತ್ಯವಿದ್ದಷ್ಟು ಬೆಳಕು ಇಲ್ಲ. ಬೆಳಕಿಗಾಗಿ ಅಲ್ಲಲ್ಲಿ ಮಾಡುಗಳನ್ನು ಮಾಡಲಾಗಿದೆ. ಗಾರೆಯಿಂದ ನಿರ್ಮಿಸಿದ ಈ ಕಟ್ಟಡಕ್ಕೆ ಅಂದೇ ಸುಣ್ಣವನ್ನು ಬಳಿಯಲಾಗಿದ್ದು. ಇಂದಿಗೂ ಕೂಡ ಹೊಳಪುನೀಡುತ್ತದೆ. ಭೂಮಿಯ ಮೇಲೆ   ಮದ್ದು ಅರೆಯುವಂತ ಕ್ರಿಯೆಗಳನ್ನು ಮಾಡಿದರೆ ಗಾಳಿ ಬಿಸಿಲು ಮತ್ತು ಕಿಡಿಗಳಿಂದ ಅಪಾಯವಾಗ ಬಹುದೆಂಬ ಕಾರಣದಿಂದ ಮದ್ದು ತಯಾರಿಸುವ ಕೋಣೆಗಳನ್ನು ನೆಲ ಅಂತಸ್ಥಿನಲ್ಲಿ ಮಾಡಿರಬಹುದು.

ಟಿಪ್ಪು ಕಟ್ಟಿಸಿದ್ದ ಅನೇಕ ಕೋಟೆಗಳಲ್ಲಿ ಈ ರೀತಿಯ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಆದರೆ ಮೇಲಿನಿಂದ ಕೆಳಕ್ಕೆ ಇಳಿಯಲಾಗದ ಜನರು ಇದೇ ಸುರಂಗಮಾರ್ಗ,ಇಲ್ಲಿಂದಲೆ ಬೇರೆಡೆಗೆ ಹೋಗಬಹುದೆಂದು ಊಹಿಸುತ್ತಾರೆ.

ಮೇಲ್ಬಾಗದಲ್ಲಿ ಮದ್ದಿನ ಕಚ್ಚವಸ್ತುಗಳನ್ನು ಸಂಸ್ಕರಿಸಿ ಜವಬ್ದಾರಿಯಿಂದ  ಕೆಳಮಳಿಗೆಯಲ್ಲಿ ಶೇಕರಿಸಿಡಲಾಗುತ್ತಿತ್ತು. ಒಟ್ಟಾರೆ ಈ ಕೋಟೆಯು ಪರಿಪೂರ್ಣವಾಗಿ ಕಟ್ಟಲ್ಪಟ್ಟಿದ್ದರೆ ಕರ್ನಾಟಕದಲ್ಲಿಯೇ ವಿಶಿಷ್ಟವಾದ ಭದ್ರವಾದ ಕೋಟೆ ಎನಿಸುತಿತ್ತು. ಶೇ 60ಭಾಗ ಕಲ್ಪನೆಯಂತೆ ಪೂರ್ಣಗೊಳಿಸಿದ್ದು ಇನ್ನು ಶೇ 40ರಷ್ಟು ಭಾಗ ಅಂದರೆ ಒಳ ಕಮಾನುಗಳ ಮುಂದಿನ ಅಂಕಣ ಅಲಂಕರಣಗಳು ಪೂರ್ಣಗೊಳ್ಳಲಿಲ್ಲ. ಇದಕ್ಕೆ ಕಾರಣ ಹಲವು ಇರಬಹುದು.

ಕಲ್ಲಿನಕೋಟೆಗೆ ಅಂಟಿಕೊಂಡಂತೆ 10ಅಡಿ ಅಗಲದ 10ಅಡಿ ಆಳವಾದ, ಕಡಿದಾದ ಕಂದಕವೊಂದಿದ್ದು ಈ ಕಂದಕದಿಂದ 10-12-15-20 ಅಡಿಗಳ ಅಂತರದಲ್ಲಿ ಗುಡ್ಡದ ಅಂಚಿಗೆ ಅಂಟಿಕೊಡಂತೆ 2ಅಡಿ ಅಗಲ 4ಅಡಿ ಎತ್ತರದ ಗಾರೆಯಿಂದ ಭದ್ರಗೊಳಿಸಿದ ಇಟ್ಟಿಗೆಯ ಹೊರಕೋಟೆ ಇದೆ. 

ಈಗ ಇದು ಕೂಡ ನಾಮಾವಶೇಷವಾಗುತಿದ್ದು ಕೆಲವುಕಡೆ ಕುರುಹುಗಳೇ ಕಾಣಿಸುತ್ತಿಲ್ಲ. ಈ ಹೊರ ಕೋಟೆಯನ್ನು ಮೂಲಕೋಟೆ ಕಟ್ಟಿಸಿದ ನಂತರದ ದಿನಗಳಲ್ಲಿ ಭದ್ರತೆಯ ದೃಷ್ಟಿಯನ್ನರಿತು ಕಟ್ಟಾಲಾಗಿದೆ.

ಇದರ ಒಳಭಾಗದಲ್ಲಿ ಶಸ್ತ್ರ ಸಜ್ಜಿತ ಸೈನಿಕರು, ಕಾವಲು ಕಾಯುತಿದ್ದರು. ಒಟ್ಟಿನಲ್ಲಿ ಇದೊಂದು ಟಿಪ್ಪುವಿನ ಕಾಲದಲ್ಲಿ ಅಭೇದ್ಯ ಕೋಟೆಯಾಗಿ ಪರಿಣಮಿಸಿತ್ತು. ಈ ಹೊರ ಕೋಟೆಯ ನೈರುತ್ಯ ದಿಕ್ಕಿನ ಒಳಭಾಗದಲ್ಲಿ ಮೂರು ಸಮಾಧಿಗಳಂತಹ ಗುರುತುಗಳಿವೆ. ಇವು ನಶಿಸಿಹೋಗಿ ಈಗ ಕೇವಲ ಮಣ್ಣಿನ ಗುಡ್ಡೆಗಳಾಗಿ ಕಾಣುತ್ತವೆ. ಇವು ಪ್ರಾಯಶಃ ಟಿಪ್ಪು ಕಡೆಯ ಸೈನಿಕರದ್ದಾಗಿವೆ ಎಂದು ಸ್ಥಳೀಯರ ಅಭಿಪ್ರಾಯ.

ಸಮಾದಿಗಳಂತೆ ತೋರುವ ಈ ಮಣ್ಣಿನ ಗುಡ್ಡೆಗಳ ಹಿನ್ನೆಲೆಯಾಗಿ ಒಂದು ವಾಸ್ತವ ಕಥೆಯು ಈ ಭಾಗದಲ್ಲಿ ಪ್ರಚಲಿತವಾಗಿದೆ. ಟಿಪ್ಪುಹುಲಿ ಎಂದೆ ಖ್ಯಾತನಾಗಿದ್ದ ಅಂದಿನ ದಿನಗಳಲ್ಲಿ ಆತನನ್ನಾಗಲೀ, ಅವನ ಸೈನ್ಯದ ಠಿಕಾಣಿಯನ್ನಾಗಲಿ ದಮನಮಾಡಬೇಕೆಂದು ಬ್ರಿಟೀಷ್ ಅಧಿಕಾರಿಗಳು ಹೊಂಚುಹಾಕುತಿದ್ದರು.

ಒಂದುದಿನ ಕೆಲವು ಬ್ರಿಟೀಷ್ ಸೈನ್ಯಾಧಿಕಾರಿಗಳು ಟಿಪ್ಪುವಿನ ಗಟ್ಟಿಯಾದ ಮತ್ತು ಸಂಪದ್ಭರಿತ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಾಯಶಃ ಮಂಗಳೂರು ದಿಕ್ಕಿನಿಂದ ಈ ಮಂಜ್ರಾಬಾದ್ ಕೋಟೆಯಡೆಗೆ 4-6 ಜನ ಸೈನ್ಯಾಧಿಕಾರಿಗಳು ಕುದುರೆಗಳ ಮೇಲೆ ದಾವಿಸಿ ಬರುತಿದ್ದರು. ಈ ಪ್ರಕರಣವು ಕೋಟೆಕಟ್ಟಿಸಿದ ನಂತರದ ಸಂದರ್ಭವಾಗಿರಬಹುದು. ಮೊದಲು ಕೋಟೆಯಮೇಲಿನ ಸೈನಿಕರನ್ನು ಸದೆ ಬಡಿದು ಒಳಗೆನುಗ್ಗಿ ಕೋಟೆಯನ್ನುವಶಪಡಿಸಿಕೊಳ್ಳುವುದರ ಮೂಲಕ ಕೊಲ್ಲಿಸುವ ಯೋಜನೆ ಬ್ರಿಟೀಷರದಾಗಿತ್ತು. ದೂರದಿಂದಲೇ ಬ್ರಿಟೀಷ್ ಅಧಿಕಾರಿಗಳು ಕೋಟೆಯೆಡೆಗೆ ದಾವಿಸಿ ಬರುತ್ತಿರುವುದನ್ನು ಮನಗಂಡ ಸೈನಿಕರು ಕೋವಿಗಳಿಂದ ಸಣ್ಣ ಸಣ್ಣ ತುಪಾಕಿಯಿಂದ ಅದರೆಡೆಗೆ ಗುಂಡುಗಳನ್ನು ಹಾರಿಸಲಾರಂಬಿಸಿದರು. ಆ ಕೂಡಲೆ ಕಾರ್ಯ ಸಫಲವಾಗಲಿಲ್ಲವೆಂದು ಅರಿತ ಕೋಟೆಯ ಮೇಲಿನ ಅಸಂಖ್ಯಾತ ಸೈನಿಕರನ್ನು ಕಂಡು ಬ್ರಿಟೀಷ್ ಸೈನಿಕರು ಓಟಕಿತ್ತರು.

ಈ ಕಡೆ ದಾಳಿಯಿಂದ ಮರಣಹೊಂದಿದ ಟಿಪ್ಪುವಿನ ಸೈನಿಕರ ಶವಗಳನ್ನು ಆಯಾಯ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಲಾಯಿತು. ಪ್ರಸಕ್ತಮಳೆಗಾಳಿಯ ಒಡೆತಕ್ಕೆ ಸಮಾದಿಗಳು ಹಾಳಾಗಿ ದಿಬ್ಬದಂತೆ ಕಾಣಲಾರಂಬಿಸಿದವು. ಇದರ ಕೆಳಭಾಗದ ನಾಲ್ಕುದಿಕ್ಕುಗಳಲ್ಲಿ ಮಡಿದ ಸೈನ್ಯಾಧಿಕಾರಿಗಳ  ಜನನ ಮರಣ ಮತ್ತು ಸೇವೆಯ ವಿವರ ಪರಾಕ್ರಮಗಳೆಲ್ಲವನ್ನು ಬರೆಯಿಸಲಾಯಿತು. ಈ ಸ್ಥೂಪದ ರಕ್ಷಣೆಗಾಗಿ ವರ್ಷಕ್ಕೊಮ್ಮೆ ಸುಣ್ಣ ಬಣ್ಣ ಮಾಡಿಸಲೆಂದು ಒಬ್ಬರಿಗೆ ನೇಮಿಸಲಾಗಿತ್ತಂತೆ.
ಕಾಲ ನಂತರ ಈ ಸ್ಥೂಪದ ಕಡೆ ಗಮನಹರಿಸದೆ ಇರುವುದರಿಂದಾಗಿ ಗೋರಿ ಬಿದ್ದು ಹೋಯಿತು. ಕಲ್ಲುಗಳು ದುರ್ಬಳಕೆಯಾದವು. ಈ ಸಮಾದಿಗೆ ಇಲ್ಲಿಯ ಜನರು ಫರಂಗಿಗೋರಿ ಎಂದು ಕರೆಯುತ್ತಾರೆ. ಈ ಕಾರಣದಿಂದಾಗಿ ಅಧಿಕಾರಿಯ ದಾಖಲೆಗಳು ಇಂದಿನ ಇತಿಹಾಸಕಾರರಿಗೆ ಲಭ್ಯವಾಗಲಿಲ್ಲ.

ಕೋಟೆಯ ಮೇಲೆ ಮಡಿದ ಸೈನಿಕರ ಸಮಾಧಿಯ ಪಕ್ಕದಲ್ಲಿಯೂ ಸೈನಿಕರ ಹೆಸರು ಇತರೆ ವಿಷಯಗಳನ್ನು ಪರ್ಶಿಯನ್ ಭಾಷೆಯಲ್ಲಿ ದಾಖಲಿಸಿ ಶಾಸನವೊಂದನ್ನು ನಿಲ್ಲಿಸಲಾಗಿತ್ತು. 1987 ಪುರತತ್ವ ಇಲಾಖೆಯವರು ಶಾಸನದ ನಕಲನ್ನು ತೆಗೆದುಕೊಂಡು ಹೋಗಿದ್ದರು ಇದರ ವರದಿಯನ್ನುಇನ್ನೂ ಪ್ರಕಟಿಸಿಲ್ಲ.

ಕಾಲಾ ನಂತರದಲ್ಲಿ ಅದುಕೂಡ ನಾಶವಾಗಿ ಟಿಪ್ಪುಸೈನಿಕರ ವಿಷಯಗಳು ಲಭ್ಯವಾಗಿಲ್ಲ. ಈಗ ದೊರೆತಿರುವ ವಿಷಯವು ಬಾಯಿಯಿಂದ ಬಾಯಿಗೆ ತಲೆಮಾರುಗಳಿಂದ ತಿಳಿಯುತ್ತ ಬಂದದ್ದನ್ನು ಇಲ್ಲಿ ದಾಖಲಿಸಲಾಗಿದೆ. ಆದರೆ ಸೈನಿಕರದ್ದೆಂದು ಹೇಳಲಾಗುವ ಈ ಸಮಾದಿಗಳ ಬಗ್ಗೆ ಸಂಶೋಧಕಶ್ರೀವತ್ಸಎಸ್.ವಟಿಯವರು ಇವು ಬ್ರಿಟೀಷರ ಕಾಲದಲ್ಲಿ ಜಮೀನುಗಳ ಅಳತೆಗಾಗಿ ಮಾಡಿದ್ದ ಮೋಜಣಿ ಗುರುತುಗಳು. ಹಾಗಾಗಿ ಸೈನಿಕರನ್ನು ಬೇರೆಡೆಗೆ ದಫನ್ ಮಾಡಿರಬಹುದೆಂದು ಹೇಳುತ್ತಾರೆ.

1956ರ ಪ್ರಾಚ್ಯವಸ್ತು ಸಂರಕ್ಷಣೆ ಕಾಯ್ದೆಯಡಿ ಈ ಕೋಟೆ ಪ್ರಾಚ್ಯ ಇಲಾಖೆಯ ಸ್ಮಾರಕಾವಾಗಿ ಮಾರ್ಪಟ್ಟಿದ್ದು ಇದನ್ನು ಕಾಯಲು  ಕಾವಲುಗಾರನನ್ನು ನೇಮಕಮಾಡಲ್ಪಟ್ಟಿದೆ. ಈ ಕೋಟೆಗೆ ಹೋಗಲು ಎನ್.ಹೆಚ್ 75ರ ರಾಷ್ಟೀಯ ಹೆದ್ದಾರಿ 5 ಕಿ.ಮೀ. ತಿರುವು ರಸ್ತೆಗಳನ್ನು ದಾಟಿಹೋದರೆ ಮಂಜ್ರಾಬಾದ್ ಕೋಟೆ ಸಿಗುತ್ತದೆ. ಇಲ್ಲಿ ಹೋಟೆಲ್‍ಗಳು, ಒಂದಿಷ್ಟು ವಾಸದ ಮನೆಗಳು ಸಿಗುತ್ತವೆ. 1923ರಲ್ಲಿಯೇ ತಯಾರಿಸಲ್ಪಟ್ಟ ನಕಾಶೆಯ ಪ್ರಕಾರ ಕೋಟೆಗೆ ಹೋಗುವ ರಸ್ತೆಯು ರಾಷ್ಟ್ರೀಯ ಹೆದ್ದಾರಿ 75ರಲ್ಲಿ  ಎಡ ಭಾಗದಲ್ಲಿದೆ.

ಸಕಲೇಶಪುರದಿಂದ  4 ಕಿ.ಮೀ ಅಂತರದಲ್ಲಿ ಸಿಗುವ ದರ್ಗಾದ ಎಡಬಾಗದ ರಸ್ತೆಯ ಮೂಲಕ  ಕಾಫಿತೋಟಗಳ ಮದ್ಯೆ ಒಂದು ದಾರಿಯಿದೆ ಇದು ಕೋಟೆಯ ಮೆಟ್ಟಿಲುಗಳದಾರಿಗೆಸಂಪರ್ಕ  ಕಲ್ಪಿಸುತ್ತದೆ.

ಈಗ ದರ್ಗಾ ಸ್ಥಳದಲ್ಲಿ ಹಜರತ್ ಮಹಬೂಬ್ ಸುಬಾನಿ ನೂರಾನಿ ಮಸೀದಿ ಇದೆ. ಇದರ ಮುಂದೆ ಬಹು ಸಸ್ಯಗಳ ಮರವಿದೆ. ಇದರ ಪಕ್ಕದಲ್ಲಿ (ಎಡಕ್ಕೆ) ಒಂದು ಶಿಥಿಲಗೊಂಡಿರುವ ದ್ವಾರಬಾಗಿಲು ಇದೆ. ಇದನ್ನು ಟಿಪ್ಪು ಕಾಲದಲ್ಲಿಯೇ ಕಟ್ಟಿಸಿದ್ದು ಐತಿಹಾಸಿಕ ಕಟ್ಟಡವೆಂದು ಹೇಳಬಹುದು.

ಟಿಪ್ಪು ಸುಲ್ತಾನ್ ಗುಡ್ಡದ ಮೇಲೆ ಗಟ್ಟಿ ಮುಟ್ಟಾದ ಕೋಟೆಯನ್ನೇನೋ ವಿವಿದ ಕಾರಣಕ್ಕಾಗಿ ಕಟ್ಟಿಸಿದ್ದು ನಿಜ. ಕಾಲದ ಹೊಡೆತಕ್ಕೆ ಸಿಲುಕಿದ ಈ ಕೋಟೆ ನಲುಗಿ ಅವಶೇಷವಾಗುವ ಹಂತ ಇದೀಗ ತಲುಪಿದೆ. ಕಮಾನುಗಳು ಬಿರುಕು ಬಿಟ್ಟು ನೀರು ಸೋರುತ್ತಲಿದ್ದು. ಕಳ್ಳಕಾಕರ ಪಾಲಾಗಿ ಮಣ್ಣು ಶೇಕರಗೊಂಡಿದೆ. ಕೆಲವು ಒಳಕೋಣೆಗಳಿಗೆ ಬೆಳಕಿನ ವ್ಯವಸ್ಥೆ ಇಲ್ಲದೆ ಗಲೀಜು ತುಂಬಿ ದುರ್ವಾಸನೆ ಬರುತ್ತಿದೆ.

ಲ್ಯಾಟ್ರಿನ್ ಮಾದರಿಯ ಕೋಣೆಯಲ್ಲಿನ ಶೌಚಲಯದ ಮುಕ್ಕಾಲುಭಾಗ ಮುಚ್ಚಿಹೋಗಿದೆ. ವಿಕೃತ ಪ್ರೇಮಿಗಳಿಂದ ಅಕ್ಷರಗಳು ಕೆತ್ತಲ್ಪಟ್ಟಿದ್ದು ಗೋಡೆಗಳು ವಿರೂಪಗೊಂಡಿವೆ. ಗೈಡ್‍ಗಳು ಒಬ್ಬರು ಈ ಹಿಂದೆ ಇಲ್ಲದಿದ್ದರಿಂದ ಈ ಕೋಟೆಯ ಐತಿಹಾಸಿಕ ವಿವರ ತಿಳಿಯದಾಗಿದೆ.

ಮುಖ್ಯವಾಗಿ ಗುಡ್ಡದ ಮೇಲಿನ ಕೋಟೆಯ ಒಳಾವರಣವನ್ನು ವೀಕ್ಷಿಸಬೇಕೆಂದು ವೃದ್ದರು ಹೋಗಿಬರಲು ಗುಡದ ಬುಡದಿಂದ ರೋಫ್ ವೇ ಕಲ್ಪಿಸಿದರೆ ಸಂಪೂರ್ಣವಾಗಿ ಟಿಪ್ಪುವಿನ ಕೋಟೆಯ ಕಲಾ ಕೌಶಲ್ಯದ ಅರಿವಾಗುತ್ತದೆ. ಇದಲ್ಲದೆ ಕೋಟೆಗೆ ಸಂಬಂಧಿಸಿದಂತೆ ಭಿತ್ತಿ ಪತ್ರಗಳು, ಕರ ಪತ್ರಗಳು, ಚಿತ್ರ ಪಟಗಳನ್ನು ಮಾಡಿಸಿ ಪ್ರಚಾರ ಪಡಿಸಿದರೆ ದೇಶ ವಿದೇಶಗಳ ಪ್ರವಾಸಿಗರಿಗೆ ಅರಿವು ಮೂಡಿಸಿದಂತಗುತ್ತದೆ.

ಭಿತ್ತಿಪತ್ರ, ಕರಪತ್ರ, ಭಾವಚಿತ್ರಗಳು ಭಾರತೀಯ ಎಲ್ಲಾ ಭಾಷೆಗಳಲ್ಲಿದ್ದರೆ ಉಪಕಾರ ಮಾಡಿದಂತಾಗುತ್ತದೆ. ಇದಕ್ಕೆಲ್ಲಾ ಸಂಪರ್ಕ ಕಲ್ಪಿಸಬೇಕಾದರೆ ಸಕಲೇಶಪುರ ಕೇಂದ್ರ ಸ್ಥಳದಿಂದ ಕೋಟೆಯ ದರ್ಶನಕ್ಕೆಂದೇ ವಿಶೇಷವಾಗಿ ವಾಹನಗಳನ್ನು ಕಲ್ಪಿಸಬೇಕಿದೆ. ನಿರ್ಮಿಸಬೇಕಾದ ಪುಟ್ಟ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ವಿಶ್ರಾಂತಿ ಗೃಹವನ್ನು ಕಟ್ಟಿಸಿ ಅಲ್ಲಿ ಕೋಟೆಯ ಸಮಗ್ರ ಮಾಹಿತಿ ಮತ್ತು ಭಾವಚಿತ್ರಗಳನ್ನು ಅನಾವರಣ ಮಾಡಿದರೆ ಪ್ರವಾಸಿಗರ ನೆನಪಿನಲ್ಲಿ ಅಚ್ಚೊತ್ತಿದಂತಾಗುತ್ತದೆ. ಮೇಲುಗಡೆ ಕೋಟೆಯನ್ನು ನೋಡಲು ಹೋಗುವ ನೋಡುಗರಿಗೆ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಕೋಟೆಯ ಪಶ್ಚಿಮ, ಪೂರ್ವ ದಿಕ್ಕಿನ ಸೌಂದರ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ವ್ಯೂ ಪಾಯಿಂಟ್ ನಿರ್ಮಿಸಿದರೆ ಬಂದಂತಹವರಿಗೆ ಕೋಟೆಯ ದರ್ಶನದೊಂದಿಗೆ ಗಿರಿ ಶಿಖರಗಳ ಸೃಷ್ಟಿ ಸೊಬಗಿನ ದರ್ಶನವನ್ನು ಮಾಡಿಸಿಕೊಟ್ಟಂತಾಗುತ್ತದೆ.ಈ ಎಲ್ಲಾ ಕಾರ್ಯಗಳು ಕೈಗೂಡಲು ಪ್ರವಾಸೋಧ್ಯಮ ಇಲಾಖೆ, ಕನ್ನಡ ಸಂಸ್ಕøತಿ ಇಲಾಖೆ, ಪ್ರಾಚ್ಯ ಸಂಶೋಧನಾ ಇಲಾಖೆ ಒಟ್ಟಿಗೆ ಸೇರಿ ಒಮ್ಮನಸ್ಸು ಮಾಡಿದರೆ ಈ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬಹುದು.  ಮಂಜ್ರಾಬಾದ್  ಕೋಟೆಯನ್ನು  ಪ್ರವಾಸಿಗರ ಸ್ವರ್ಗವನ್ನಾಗಿಸೋಣ ಬನ್ನಿ 
ವಂದನೆಗಳು
(ಸಂಗ್ರಹ ದಿವಂಗತ ಚಂದ್ರಶೇಕರ್ ದೋಳೇಕರ್ ರವರ  ಮಂಜ್ರಾಬಾದ್ ಕೋಟೆ ಪುಸ್ತಕ)
*********************************************************************************

ಮಂಜ್ರಾಬಾದ್ ಕೋಟೆಯ ಮೇಲೆ ಬೀಳುವ ಮಳೆ ನೀರು ಎರಡು ಮಹಾ ಸಾಗರ ಸೇರುತ್ತದೆ

ಕೋಟೆಯ ಮೇಲೆ ಬೀಳುವ ನೀರು ಇಬ್ಬಾಗವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರುವ ಜಗತ್ತಿನ ಏಕೈಕ ಕೋಟೆ ಎಂದರೇ ಅದು ಸಕಲೇಶಪುರದ ಮಂಜ್ರಾಬಾದ್ ಕೋಟೆಯಾಗಿದೆ.

ಸಮುದ್ರಮಟ್ಟದಿಂದ ಮಂಜ್ರಾಬಾದ್ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳ ಪಡುವ ಮಲೇಯಾದ್ರಿ ಪರ್ವತ ಶ್ರೇಣಿಯಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭೂ ಗಡಿ ರೇಖೆಯ ಮದ್ಯದ ಬೆಟ್ಟದಲ್ಲಿ ನಿರ್ಮಿತವಾಗಿರುವ ಮಂಜ್ರಾಬಾದ್ ಕೋಟೆಯ ಮೇಲೆ ಬೀಳುವ ಮಳೆನೀರು ಪಶ್ಚಿಮ ಮುಖವಾಗಿ ಅರಬ್ಬಿ ಸಮುದ್ರಕ್ಕೂ ಪೂರ್ವ ಮುಖವಾಗಿ  ಬಂಗಾಳ ಕೊಲ್ಲಿಗೂ ಸೇರುತ್ತದೆ.

ಮಂಜ್ರಾಬಾದ್ ಕೋಟೆಯ ಪಶ್ಚಿಮಭಾಗದಲ್ಲಿ ಬಿದ್ದ ಮಳೆಯ ನೀರು ಎತ್ತಿನ ಹಳ್ಳ ನಂತರ ಕೆಂಪು ಹಳ್ಳ ನಂತರ  ಎಳನೀರು ನದಿ, ಗುಂಡ್ಯನದಿ ಯೊಂದಿಗೆ ಕುಮಾರದಾರ ಮೂಲಕ ನೇತ್ರವತಿ ನದಿಯ  ಸೇರಿ ಅನಂತರ ಉಲ್ಲಾಳ ಬಳಿ ಅರಬ್ಬಿ ಸಮುದ್ರ ಸೇರುತ್ತಿದೆ.

ಪೂರ್ವಬಾಗದಲ್ಲಿ ಬಿದ್ದ ನೀರು ಹೇಮಾವತಿ ನದಿಯ ಮೂಲಕ ಕಾವೇರಿ ನದಿಗೆ ಸಂಗಮವಾಗಿ ಚೆನೈ ಬಳಿ ಬಂಗಾಳ ಕೊಲ್ಲಿ ಸೇರುತ್ತದೆ.

ಒಂದು ನಿರ್ದಿಷ್ಟ ಪ್ರದೇಶಕ್ಕೆ ಬೀಳುವ ಮಳೆಯ ನೀರು ಎರಡು ಸಾಗರಗಳಿಗೆ ಇಬ್ಬಾಗವಾಗಿ ಹರಿಯುತ್ತದೆ ಎನ್ನುವ ಮಾಹಿತಿಯನ್ನು ಆದರಿಸಿ ಈ ಬೆಟ್ಟದ ಮೇಲೆ ಕೋಟೆ ಕಟ್ಟಲು ಕಾರಣವಾಗಿರಬಹುದು.
ಈ ಬಗ್ಗೆ ಸರಕಾರ ಮತ್ತಷ್ಟು  ಮಾಹಿತಿ   ಸಂಗ್ರಹಿಸುವ ಅಗತ್ಯವಿದೆ.

ನೀರು ಇಬ್ಬಾಗವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರುವ ಸ್ಥಳವಾಗಿ ಸಕಲೇಶಪುರ ತಾಲ್ಲೂಕು ಬಿಸ್ಲೆ ಸಮೀಪ ಮಂಕನಹಳ್ಳಿಯಲ್ಲಿ ಬ್ರಿಟೀಷರು ಬ್ರಿಡ್ಜ್ ನಿರ್ಮಿಸಿದ್ದು `ವೇ ಆಫ್ ಬೆಂಗಾಲ್ ಮತ್ತು ಅರಬಿಯನ್ ಸೀ’ ಎಂಬ ನಾಮ ಫಲಕವನ್ನು ನೋಡಬಹುದಾಗಿದೆ.

ಸಕಲೇಶಪುರಕ್ಕೆ ಹತ್ತಿರವಾಗಿ ಕಂಡುಬರುವ ಮತ್ತೋಂದು ಪ್ರದೇಶವೆಂದರೇ 4 ಕಿ ಮೀ ದೂರದಲ್ಲಿರುವ ದೋಣಿಗಾಲ್ ಸಮೀಪದ ಮಂಜ್ರಾಬಾದ್ ದರ್ಗಾವಾಗಿದೆ.

ದರ್ಗಾದ ಕಾಣಿಕೆ ಹುಂಡಿ ಮುಂಭಾಗದ ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿ ಮೇಲೆ ಬೀಳುವ ನೀರು ಇಬ್ಬಾಗವಾಗಿ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸೇರುತ್ತದೆ.
ರುದ್ರ ರಮಣೀಯ ಸೂರ್ಯೋದಯ ಮತ್ತು ಸೂರ್ಯಸ್ತಮ:
ಮಂಜ್ರಾಬಾದ್ ಕೋಟೆಯ ಮೇಲೆ ಸೂರ್ಯೋದಯ ಮತ್ತು ಸೂರ್ಯಸ್ತಮ ವೀಕ್ಷಣೆ ಒಂದು ರೋಮಾಂಚನ ಅನುಭವವಾಗಿದೆ. ಮೋಡಗಳ ಮದ್ಯೆ ಮುಂಜಾನೆ ಮೂಡುವ ಸೂರ್ಯನ ಕಿರಣಗಳು ಪಶ್ಚಿಮ ಘಟ್ಟಗಳ ನಿಸರ್ಗ ಸೌಂದರ್ಯದ ಮೇಲೆ ಬೀಳುವ ಮೊದಲು ದೃಷ್ಯದಲ್ಲಿ ಮಂಜುಕಂಡುಬಂದರೆಕೆಲವೇ ಸಮಯದಲ್ಲ್ಲಿ ಮಂಜು ಕರಗಿ ಕಣ್ಣಿನ ಮುಂದೆ ಪ್ರಕೃತಿ ಸೌಂದರ್ಯದ ರಾಶಿ ತೆರೆದುಕೊಳ್ಳುತ್ತದೆ. ಸಂಜೆಯ ಸೂರ್ಯಸ್ತಮ ಸುಂದರ ಅನುಭವ ನೀಡುತ್ತದೆ.

ದುಖಃಕರ ವಿಚಾರವೆನೆಂದರೇಸೂರ್ಯೋದಯ ಮತ್ತು ಸೂರ್ಯಸ್ತಮ ವೀಕ್ಷಣೆಗೆ ಇಲ್ಲಿ ಅವಕಾಶವಿಲ್ಲದಂತಾಗಿದೆ.
#ಮಲ್ನಾಡ್ ಮೆಹಬೂಬ್
*********************************************************************************

ಟಿಪ್ಪು ಸುಲ್ತಾನ್ ನಿರ್ಮಿತ   ಮಂಜ್ರಾಬಾದ್  ದರ್ಗಾ

 ಹಾಸನ ಜಿಲ್ಲೆ  ಸಕಲೇಶಪುರ ತಾಲ್ಲೂಕು ತನ್ನದೇ ಆದ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಕಲೆ ಸಾಹಿತ್ಯ , ಪ್ರಕೃತಿ  ಸೊಬಗಿನ  ಬೀಡಾಗಿದೆ. ಅಧ್ಯಾತ್ಮಿಕ  ಮತ್ತು ಐತಿಹಾಸಿಕವಾಗಿಯೂ ಪ್ರಸಿದ್ದಿಯಾಗಿದೆ. ಇಲ್ಲಿಯ   ಮಂಜ್ರಾಬಾದ್ ಕೋಟೆ   ಜಗತ್ತಿನ  ಪ್ರೇಕ್ಷಣೀಯ  ಸ್ಥಳಗಳಲ್ಲಿ  ಒಂದಾಗಿದೆ.  ಈ ಕೋಟೆಯ ಸಮೀಪದಲ್ಲಿ  ಕೋಟೆಯ ನಂಟನ್ನು   ಸಾರುವ ಸರ್ವಧರ್ಮ ಸಾಮರಸ್ಯ ತಾಣ  “ಮಂಜ್ರಾಬಾದ್ ದರ್ಗಾ “  ಎಂದೇ  ಪ್ರಸಿದ್ದಿಯಾಗಿರುವ  ‘ಹಜರತ್ ಮಹಬೂಬ್ ಸುಭಾನಿ(ಅ) ನೂರಾನಿ ದರ್ಗಾ   ಮತ್ತು  ಅನಾಥಾಶ್ರಮ ಇದೆ.

ಈ ದರ್ಗಾದ  ವಿಶೇಷತೆ  ನಿಜಕ್ಕೂ  ಅಧ್ಬುತವಾಗಿದೆ. ಮೌಡಕ್ಕೆ  ಇಲ್ಲಿ  ಶೇಕಡ ಶೂನ್ಯದಷ್ಟು  ಪ್ರಾಮುಖ್ಯತೆ ಇಲ್ಲ,   ಆದರೆ  ವಿಶ್ವಾಸಕ್ಕೆ  ಶೇಕಡ ನೂರರಷ್ಟು   ಅವಕಾಶವಿದೆ. ನೇರವಾಗಿ   ಹೇಳಬಹುದಾದರೆ   0% ಮೌಡ್ಯ   100 ವಿಶ್ವಾಸ , ಇಲ್ಲಿ ತಾಯತ ಕಟ್ಟುವುದು, ನೀರು ದಂ ಮಾಡುವುದು  , ದೆವ್ವ ಬಿಡಿಸುವುದು ,  ಇದ್ಯಾವುದು ಕಂಡು ಬರುವುದಿಲ್ಲ ಆದರೆ   ನಂಬಿಕೆಗಳಿಗೆ ಅಡ್ಡಿಯಿಲ್ಲ .

ಇಲ್ಲಯ ಪವಾಡಗಳ ಬಗ್ಗೆ  ವಿಶ್ವಾಸವನ್ನು   ಇರಿಸುವ  ಜನ   ಮನ್ನತ್ (ಹರಕೆ)ಗಳನ್ನು   ಪುರೋಹಿತರ  ಸಹಾಯವಿಲ್ಲದೆ  ಸ್ವಯಂ ಮಾಡುತ್ತಾರೆ ಹಾಗೂ   ಈಡೇರಿಸುತ್ತಾರೆ. ವರ್ಷಕೊಮ್ಮೆ  ಉರುಸ್ ನಡೆಯುತ್ತದೆ.
ಈ  ಆವರಣದಲ್ಲಿ  ಪುರಾತನ  ಮರವಿದೆ   ಈ ಮರದಲ್ಲಿ   50 ಕ್ಕೂ ಹೆಚ್ಚಿನ  ವಿವಿಧ ಪರಾವಲಂಭಿ ಸಸ್ಯಗಳಿವೆ. ಮಸೀದಿ ಇದೆ, ಮಹಿಳೆಯರು ನಮಾಜ್ ನಿರ್ವಹಿಸಲು  ಇಲ್ಲಿ ಅವಕಾಶವಿದೆ. ಬೇಟಿ ಕೊಡುವ ಪ್ರವಾಸಿಗರು  ತಂಗಲು ಸೌಲಭ್ಯವಿದೆ. ಹೈಟೆಕ್   ಶೌಚಾಲಯಗಳು  ಇವೆ.  ಸುಂದರ  ಉದ್ಯಾನವನ (ಪಾರ್ಕ್) ಇದೆ.

ದರ್ಗಾದ ಇತಿಹಾಸ
ಈ ಮಂಜ್ರಾಬಾದ್  ದರ್ಗಾ  ಮೈಸೂರು  ಹುಲಿ  ಹಝತ್  ಟಿಪ್ಪು  ಸುಲ್ತಾನ್   ಕಾಲದ  ಇತಿಹಾಸವನ್ನು ಹೇಳುತ್ತದೆ. ಸುಲ್ತಾನ್  ಕಾಲದಲ್ಲಿ  ಈಪ್ರದೇಶಕ್ಕೆ  ಮಂಜ್ರಾಬಾದ್   ಎಂದು  ಕರೆಯಲಾಗುತ್ತಿತ್ತು. ಇತರೆ  ಭಾಗದಿಂದ ಬರುವ  ಜನರಿಗೆ ಈ ಪ್ರದೇಶದ ಗುರುತಿಗಾಗಿ ಅಂದು ನಿರ್ಮಿಸಿದ್ದ`ಊರ ಹೆಬ್ಬಾಗಿಲು’ ಇಂದಿಗೂ   ಸುರಕ್ಷಿತವಾಗಿದೆ.
ಪ್ರಯಾಣಿಕರು ತಂಗಲು ಮರದ ಕೆಳಗೆ   ಸ್ಥಳವಿತ್ತು  . ಸೈನಿಕರ  ಕ್ಯಾಂಪ್ ಸಹ ಇಲ್ಲಿತ್ತು  .ನೀರಿನ  ಸೌಕರ್ಯಕ್ಕೆ  ವಿಶಾಲವಾದ ಕೆರೆ,  ಕುಡಿಯುವ  ನೀರಿಗಾಗಿ   ತೆರೆದ ಬಾವಿಗಳು  ಇದ್ದವು. ಹಲವು   ಮೂಲಭೂತ ವ್ಯವಸ್ಥೆಯಿಂದ  ವಿಶ್ರಾಂತಿ ಪಡೆಯಲು  ಈ ಸ್ಥಳ ಉತ್ತಮವಾಗಿತ್ತು.

ಇಲ್ಲಿ  ಎರಡು  ಖಬರಸ್ಥಾನ್ ಕಂಡು ಬರುವುದರಿಂದ  ಜನ  ಹೆಚ್ಚಾಗಿ   ವಾಸಿಸುತ್ತಿದ್ದರು   ಎಂದು  ತಿಳಿದು ಬರುತ್ತದೆ. ತಾತ್ಕಲಿಕ ಮನೆಗಳಲ್ಲಿ   ಸಾಕಷ್ಟು ಸೈನಿಕರು   ವಾಸಿಸುತ್ತಿದ್ದರು   ಪ್ರಯಾಣಿಕರಿಗೆ   ಆಹಾರ  , ವಿಶ್ರಾಂತಿ  , ಭದ್ರತೆಗೆ ಅಲ್ಲಿ   ಆದ್ಯತೆ ಇತ್ತು  . ಟಿಪ್ಪು   ಸುಲ್ತಾನ್   ಹುತಾತ್ಮರಾದ  ನಂತರ ಈ ಸ್ಥಳದಲ್ಲಿ   ಸೈನಿಕರು   ಮಂಜ್ರಾಬಾದ್  ಕೋಟೆಯ   ಕಾಮಗಾರಿ ಸ್ಥಗಿತಗೊಳಿಸಿದ ಕಾರಣ  ಈ ಸ್ಥಳ  ಪಾಳು  ಬಿದ್ದಿತ್ತು  ಎಂದು ಹೇಳಲಾಗುತ್ತದೆ.

ಈ ಸ್ಥಳವನ್ನು ಗುರುತಿಸಿ ಒತ್ತು  ಕೊಟ್ಟವರು   ದಿವಂಗತ   ಶಾ ಸಾಹೇಬ್ ರವರು   ಪಾಳು ಬಿದ್ದಿದ್ದ   ಈ ಸ್ಥಳಕ್ಕೆ  ಧಾರ್ಮಿಕ  ಸ್ಪರ್ಶ ನೀಡಿದರು, ಹಜರತ್ ಮಹಬೂಬ್ ಸುಭಾನಿ ನೂರಾನಿ   ಚಿಲ್ಲಾ ಎಂದು  ಹೆಸರಿಸಿದರು ಮತ್ತು  ಇಲ್ಲಿ ಅನಾಥ ಮತ್ತು  ನಿರ್ಗತಿಕ ಮಕ್ಕಳ ಕೇಂದ್ರವನ್ನು   ಪ್ರಾರಂಭಿಸಿದರು.

ಬಾಗ್ದಾದ್  ದೇಶದಿಂದ  ಹಜರತ್ ಮಹಬೂಬ್ ಸುಭಾನಿ (ರ)  ಭಾರತಕ್ಕೆ ಬಂದ ಸಾಕ್ಷಿ ಇಲ್ಲ  ಆದರೆಹಜರತ್ ಮಹಬೂಬ್ ಸುಭಾನಿ (ರ)   ಹೆಸರಿನಲ್ಲಿ   ಈ ಸ್ಥಳದಲ್ಲಿ   ಪವಾಡ ನಡೆಯುತ್ತದೆ ಎಂದು ವಿಶ್ವಾಸ ಇರಿಸಲಾಗುತ್ತದೆ. ಸಮೀಪದಲ್ಲಿ  ಮತ್ತೋಂದು   ಪ್ರಸಿದ್ದವಾದ  ಅತಿಷಾ ವಲಿ ದರ್ಗಾ ಅದೆ  ಅದಕ್ಕೆ  ಹೊಂದಿಕೊಂಡು  ಪುರಾತನ ಖಬರಸ್ಥಾನ್ ಇದೆ. ಉರುಸ್  ಸಂಧರ್ಭದಲ್ಲಿ  ಈ ಸ್ಥಳಕ್ಕೆ  ಹೊಂದಿಕೊಳ್ಳುವ  ಹೆದ್ದಾರಿಯ  ಪಕ್ಕದಲ್ಲಿರುವ   ಮತ್ತೊಂದು  ಪುರಾತನ   ಖಬರಸ್ಥಾನ್‍ಗೆ   ಹಲವಾರು   ದಶಕಗಳಿಂದ ಉರುಸ್ ಸಂದರ್ಬದಲ್ಲಿ  ಸಂದಲ್  ಯಾತ್ರೆ ನಡೆಯುತ್ತದೆ.

ಈ ಸ್ಥಳ ಗತಕಾಲದಲ್ಲಿ ಜನ ವಸತಿಯ ಕೇಂದ್ರವಾಗಿತ್ತು ಎಂದು ಹವ್ಯಾಸಿ ಇತಿಹಾಸ ಸಂಶೋದಕ ಲೇಖಕ ದಿವಂಗತ ಚಂದ್ರಶೇಖರ್ ದೊಳೇಕರ್ ಹೇಳುತ್ತಿದ್ದರು. ದರ್ಗಾದ ಒಳಗಿರುವ ಲಿಪಿಗಳು ಫರ್ಷಿಯನ್ ಬಾಷೆಯಲ್ಲಿವೆ, ಇಲ್ಲಿ ಉತ್ಕನ್ನ ನಡೆಸುವಾಗ ಟಿಪ್ಪು ಸುಲ್ತಾನ್ ಆಡಳಿತ ಸಂದರ್ಭದ ನಾಣ್ಯಗಳು ದೊರತ್ತಿದ್ದವು ಎಂದು ತನ್ನ ಜೀವಿತಾವಧಿಯಲ್ಲಿ ದೋಳೆಕರ್ ಹೇಳುತ್ತಿದ್ದರು.

ಅನಾಥಾಶ್ರಮ 
ವಿಶೇಷವಾಗಿ  ಇಲ್ಲಿ ಒಂದು ಅನಾಥಾಶ್ರಮ ಇದೆ . ಅನಾಥ ಮತ್ತು  ನಿರ್ಗತಿಕ   ಮಕ್ಕಳ ವಿಧ್ಯಾಭ್ಯಾಸಕ್ಕೆ  ಆದ್ಯತೆ  ನೀಡಲಾಗಿದೆ  ಒಂದನೇ   ತರಗತಿಯಿಂದ  ಪಧವಿಯವರೆಗೆ  ಉಚಿತ ವಿಧ್ಯಾಭ್ಯಾಸ ನೀಡಲಾಗುವುದು  ಪೋಷಕರು ಬಯಸುವ  ಭಾಷೆಯಲ್ಲಿ   ಹಾಗೂ   ಪ್ರತಿಷ್ಟಿತ ಶಾಲೆಗಳಲ್ಲಿ  ವಿಧ್ಯಾಬ್ಯಾಸ  ನೀಡಲಾಗುತ್ತದೆ.

ಅನಾಥ ಮಕ್ಕಳಿಗೆ  ಉತ್ತಮ ವಸತಿ  ಸೌಲಭ್ಯಗಳನ್ನು   ಕಲ್ಪಿಸಲಾಗಿದೆ. ಆಧುನಿಕ   ತಂತ್ರಜ್ಞಾನ ಅಂದರೇ ಸ್ಮಾರ್ಟ್ ಕ್ಲಾಸ್  ಮೂಲಕ ವಿಧ್ಯಾಭ್ಯಾಸ ನೀಡಲಾಗುತ್ತದೆ. ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತದೆ. ಉಪಗ್ರಹ ಆಧಾರಿತ   ಶಿಕ್ಷಣವನ್ನು  ನೀಡಲಾಗುತ್ತದೆ. ಮಕ್ಕಳ ಕಲೆ,ಸಾಹಿತ್ಯ, ಸಾಂಸ್ಕ್ರತಿಕ  ಹಾಗೂ  ಕ್ರೀಡಾ ಮನೋಭಾವವನ್ನು  ಗುರುತಿಸಿ  ಒತ್ತು  ನೀಡಲಾಗುತ್ತದೆ. ವಿಧ್ಯಾರ್ಥಿಗಳ   ಪೋಷಕರಿಗೆ   ಬೇಟಿ   ಸಮಯದಲ್ಲಿ ತಂಗುವ ಸೌಲಭ್ಯವಿದೆ. ಸಾರ್ವಜನಿಕರಿಗೆ   ಹಾಗೂ ವಿಧ್ಯಾರ್ಥಿಗಳ ಅನುಕೂಲಕ್ಕಾಗಿ  ಗ್ರಂಥಾಲಯವೂ  ಇದೆ. ಹಾಗೇಯೇ   ಇಲ್ಲೋಂದು  ಸಮುದಾಯ  ಭವನವಿದ್ದು  , ಮದುವೆ  ಮುಂತಾದ   ಕಾರ್ಯಕ್ರಮಗಳಿಗೆ   ಅತ್ಯಂತ  ಕಡಿಮೆ  ದರದಲ್ಲಿ  ಬಾಡಿಗೆಗೆ ನೀಡಲಾಗುತ್ತದೆ. ಬಡ ಹೆಣ್ಣು ಮಕ್ಕಳ ಮದುವೆಗೆ ಸಮುದಾಯ ಭವನವನ್ನು   ಉಚಿತವಾಗಿ   ನೀಡಲಾಗುತ್ತದೆ. ಬಡವರ   ಆರೋಗ್ಯಕ್ಕೆ ಧನ ಸಹಾಯ,ವಿದ್ಯಾರ್ಥಿವೇತನ, ಅನಾಥಶವಗಳ ಸಂಸ್ಕಾರಕ್ಕೆ  ಧನ ಸಹಾಯ ಮಾಡಲಾಗುತ್ತದೆ.

ಶರೀಯತ್ ಕಾಲೇಜ್:
ತಾಲ್ಲೂಕಿನ ಮುಸ್ಲಿಂ ಸಮೂದಾಯದ ಮಹಿಳೆಯರಲ್ಲಿ  ದಾರ್ಮಿಕ ಜೀವನದ ಮೌಲ್ಯಗಳನ್ನು ತಿಳಿಸಲು ಹಾಗೂ ದಾರ್ಮಿಕ ಶಿಕ್ಷಣ ನೀಡುವಂತಹ ಅರಿವು ಮೂಡಿಸಲು ಶರಿಯತ್ ಕಾಲೇಜ್ ನಿರ್ಮಿಸಲಾಗಿದೆ. ತಾಲ್ಲೂಕಿನ ವಿವಿಧ ಪ್ರದೇಶಗಳಿಂದ ಮುಸ್ಲಿಂ ಮಹಿಳೆಯರು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಾರೆ.ಬೆಳಗ್ಗೆ 11 ರಿಂದ ಮದ್ಯಾಹ್ನ 3 ಘಂಟೆಯವರಗೆ ತರಗತಿಗಳು ನಡೆಯುತ್ತವೆವಿದ್ಯಾಭ್ಯಸದ ಅನೂಕೂಲಕ್ಕೆ ವಾಹನದ ಸೌಲಭ್ಯವಿದೆ.

ಟಿಪ್ಪು   ಸುಲ್ತಾನ್   ಜೀವನದ  ಬಗ್ಗೆ  ಮಾಹಿತಿ 
ಇಲ್ಲಿಗೆ ಬೇಟಿ  ನೀಡುವ  ಸಾರ್ವಜನಿಕರಿಗೆ  ಟಿಪ್ಪು   ಸುಲ್ತಾನ್ ರವರ  ಜಿವನದ   ಬಗ್ಗೆ  ಮಾಹಿತಿ   ನಿಡಲು  ಪ್ರಾಜೆಕ್ಷರ್   ಮೂಲಕ   ಕಿರುಚಿತ್ರ ಪ್ರದರ್ಶನ ವ್ವವಸ್ಥೆಯು ಇಲ್ಲಿದೆ.ಗ್ರಂಥಾಲಯದಲ್ಲಿ   ಟಿಪ್ಪುಸುಲ್ಲಾನ್   ರವರ  ಬಗ್ಗೆ  ವಿವಿಧ  ಲೇಖಕರು ಬರೆದಿರುವ   ಸಾಹಿತ್ಯ   ಲಭ್ಯವಿದೆ. ಭವಿಷ್ಯದಲ್ಲಿ   ಟಿಪ್ಪು  ಸುಲ್ತಾನ್  ಮ್ಯೂಜಿಯಂ ಸ್ಥಾಪಿಸಲು ಚಿಂತಿಸಲಾಗುತ್ತಿದೆ.
ಭವಿಷ್ಯದ ಯೋಜನೆಗಳು
ಮಂಜ್ರಾಬಾದ್ ದರ್ಗಾದಲ್ಲಿ ಉದ್ಯೋಗಾಧಾರಿತ ಶಿಕ್ಷಣ ಪ್ರಾರಂಭಿಸುವುದು ಸ್ವಯಂ ಉದ್ಯೋಗ ತರಬೇತಿಯ ಪ್ರತ್ಯೇಕ ಸ್ಥಾಪನೆ ಮಾಡುವುದು.

ಈ ಪ್ರದೇಶದ ಇನ್ನೊಂದು ಪ್ರಾಮುಖ್ಯತೆ
ದರ್ಗಾದ ಮುಂಭಾಗ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಇದ್ದು ಈ ಪ್ರದೇಶದಲ್ಲಿ ವಿಶೇಷವಾದ ಒಂದು ಅಂಶವಿದೆ.ಈ ಪ್ರದೇಶದಲ್ಲಿ ಬೀಳುವ ಮಳೆಯ ನೀರು ಅರಬ್ಬಿ ಸಮುದ್ರಕ್ಕೆ ಮತ್ತು ಬಂಗಾಳ ಕೊಲ್ಲಿಗೆ ವಿಭಾಗವಾಗುತ್ತದೆ.
ಮಂಜರಾಬಾದ್ ದರ್ಗಾದ ಮುಂಭಾಗದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಬೀಳುವ ಮಳೆಯ ನೀರು ಎತ್ತಿನಹಳ್ಳ , ಕೆಂಪು ಹೊಳೆ, ಎಳನೀರು ನದಿ, ಹಾಗೂ  ಗುಂಡ್ಯ ನದಿಯೊಂದಿಗೆ ಕುಮಾರದ್ವಾರ ಮೂಲಕ ನೇತ್ರಾವತಿನದಿ ಸೇರಿ ಅನಂತರ ಉಳ್ಳಾಲ ಬಳಿ ಇರುವ ಅರಬ್ಬಿಸಮುದ್ರ ಸೇರುತ್ತದೆ
ಮಂಜ್ರಾಬಾದ್ ದರ್ಗಾದ ಅಂಗಳದಲ್ಲಿ ಬಿದ್ದ ನೀರು ಹೇಮಾವತಿ ನದಿಯ ಮೂಲಕ ಕಾವೇರಿ ನದಿಗೆ ಸಂಗಮವಾಗಿ ಚೆನ್ನೈ ಬಳಿ ಬಂಗಾಳಕೊಲ್ಲಿ ಸೇರುತ್ತದೆ

ಪುರಾತನ ಮರ:
ಇಲ್ಲೊಂದು ಬಾರಿಗಾತ್ರದ ಮರವಿದ್ದು ಮೂಲ  ಮಾವಿನ ಮರವಾಗಿದೆ.   ನೂರಾರು ವರ್ಷ ವಯಸ್ಸಿನ ಮರದಲ್ಲಿ 50ಕ್ಕೂ ಹೆಚ್ಚು ಪರಾವಲಂಬಿ ಸಸ್ಯಗಳಿವೆ ಎಂದು ತಾನು ಇದನ್ನು ಗುರುತಿಸಿರುವುದಾಗಿ ಇತಿಹಾಸಕಾರ ಚಂದ್ರಶೇಕರ್ ದೋಳೆಕರ್ ತನ್ನ ಲೇಖನದಲ್ಲಿ ಉಲ್ಲೇಖಿಸಿದ್ದರು. ಸ್ಥಳಿಯರು 50ಕ್ಕೂ ಹೆಚ್ಚು ಪರವಾಲಂಬಿ ಸಸ್ಯಗಳನ್ನು ಗುರುತಿಸಿದ್ದರು ಎಂದು ಹೇಳಲಾಗುತ್ತದೆ. ಶಾದಿ ಮಹಾಲ್ ನಿರ್ಮಾಣದ ವೇಳೆ ಪುರಾತನ ಮರದ ಬಾರಿ ಗಾತ್ರದ ಕೊಂಬೆಯನ್ನು ಕಡಿಯಲಾಗಿದೆ. ಸಮತೋಲನ ಕಳೆದುಕೊಂಡಿರುವ ಮರದ ಒಂದು ಕೊಂಬೆ ಗಾಳಿ ಮಳೆಗೆ ಬಿದ್ದು ಹೋಗಿತ್ತು, ಯಾವುದೇ ಪ್ರಾಣಾಪಾಯವಾಗಲಿಲ್ಲ ಈ ಮರದಿಂದ ಅಪಾಯ ತಪ್ಪಿದ್ದಲ್ಲ. ಸಮತೊಲನ ಕಳೆದು ಕೊಂಡಿರುವ ಮರದ ಕೊಂಬೆಗಳನ್ನು ಕತ್ತರಿಸುವುದು ಒಳಿತು ಇದರಿಂದ ಮರ ಮತ್ತು ಹಾನಿಯನ್ನು ತಡೆಗಟ್ಟಬಹುದು ಎಂಬುದು ಅನೇಕರ ಅಭಿಪ್ರಾಯವಾಗಿದೆ.

ಪುರಾತನ ಕೆರೆ:
ದರ್ಗಾಕ್ಕೆ ಹೊಂದಿಕೊಂಡಿರುವ ಒಂದು ಕೆರೆ ಇದ್ದು ಈ ಕೆರೆ ಸಹ ಪುರಾತನದ್ದಾಗಿದೆ.  ಗತಕಾಲದಲ್ಲಿ ಅಭಿವೃದ್ದಿ ಪಡಿಸಿರುವ ಕೆರೆಯಾಗಿದೆ. ಸುತ್ತಲು ಚಪ್ಪಡಿಯ ಹಾಸು ಕಲ್ಲುಗಳಿಂದ ನಿರ್ಮಿಸಿಲಾಗಿದೆ. ಈ ಕೆರೆಯ ನೀರನ್ನು ಸುತ್ತಮುತ್ತಲಿನ ಜನ ಕೃಷಿ ಹಾಗೂ ಕುಡಿಯಲು ಉಪಯೋಗಿಸಲಾಗುತ್ತದೆ,

ಕೊಳ:
ಪಕ್ಕದಲ್ಲಿರುವ ಕಾಫಿ ತೋಟದಲ್ಲೊಂದು ಕಚ್ಚ ಇಟ್ಟಿಗೆಯಿಂದ ಕಟ್ಟಿರುವ ಪುರಾತನ ಕೊಳ ಇದೆ. ಇದನ್ನು ನಮಾಜ್ ಮಾಡುವ  ಮೊದಲು ವಝು ಮಾಡಲು ಉಪಯೋಗಿಯಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಈ ಕೊಳದ ನೀರನ್ನು ಕಾಫಿತೋಟದ ಮಾಲಿಕರು ಕೃಷಿಗಾಗಿ ಉಪಯೂಗಿಸುವ ಮೂಲಕ ಕೊಳವನ್ನು ಸಂರಕ್ಷಿಸಿದ್ದಾರೆ.

ನಶಿಸಿಹೋದ ಪುರಾತನ ತಂಗುದಾಣ:
ಇತ್ತೀಚಿಗೆ ನಿರ್ಮಿಸಿರುವ ಶಾದಿಮಹಲ್ ಕಟ್ಟಡದ ಪ್ರದೇಶದಲ್ಲಿ ಪುರಾತನ ತಂಗುದಾಣವಿತ್ತು. ಶಾದಿ ಮಹಾಲ್ ನಿರ್ಮಿಸುವಾಗ ಪುರಾತನ ತಂಗುದಾಣ ನಶಿಸಿಹೋಗಿದೆ.
ಈ ಪ್ರದೇಶ 20 ವರ್ಷಗಳ ಹಿಂದೆ ಪುರಾತನ ಇತಿಹಾಸ ಹೇಳುವ ಸ್ಥಳವಾಗಿತ್ತು, ಇದರ ಪಕ್ಕದಲ್ಲಿ ಕಿರಿದಾದ ಚಪ್ಪಡಿ ಕಲ್ಲುಗಳ ಕಾಲುದಾರಿ ಇತ್ತು. ಈ ಕಾಲುದಾರಿ ದರ್ಗಾ ಮತ್ತು ಹೆದ್ದಾರಿ ಪಕ್ಕದಲ್ಲಿ ಮಂಜ್ರಾಬಾದ್ ಕೋಟೆಗೆ ಹೋಗುವ ರಸ್ತೆಗೆ ಹೊಂದಿಕೊಂಡಿದೆ.
ಈ ಪ್ರದೇಶದಲ್ಲಿ ಎಣ್ಣೆಯ ದೀಪಗಳನ್ನು ಹಚ್ಚುವ ಮಾದರಿಯಲ್ಲಿ ಸಣ್ಣ ಸಣ್ಣ ಕಂದಕಗಳಿದ್ದವು. ಇದರ ಮೇಲ್ ಬಾಗದಲ್ಲಿ ಗೊಪುರವಿದ್ದು ಇದರಲ್ಲೂ ಸಹ ಎಣ್ಣೆ ದೀಪಗಳನ್ನು ಹಚ್ಚುವ ಕಂದಕಗಳಿವೆ, ದರ್ಗಾದ ಸುತ್ತಲು ಕೌಂಪೌಂಡ್ ಮಾದರಿಯಲ್ಲಿ ಗೊಡೆಗಳಿದ್ದವು   ಇದರಲ್ಲೂ ಸಹ ಎಣ್ಣೆ ದೀಪಗಳನ್ನು ಹಚ್ಚುವ ಕಂದಕಗಳಿದ್ದವು.  ದರ್ಗಾವನ್ನು ಆಧುನಿಕರಣಗೊಳಿಸುವ ಸಂದರ್ಭದಲ್ಲಿ ಇವು ನಶಿಸಿಹೋಗಿವೆ.
ಹಝರತ್ ಟಿಪ್ಪು ಸುಲ್ತಾನ್ ಈ ಪ್ರದೇಶದಲ್ಲಿ ನಮಾಝ್ ನಿರ್ವಹಿಸುತ್ತಿದ್ದರು ಎಂದು ಹೇಳುವ ದಂತ ಕಥೆಯು ಕೇಳಿಬರುತ್ತದೆ. ಮಂಜ್ರಾಬಾದ್ ಕೋಟೆ ನಿರ್ಮಿಸುವ ಸಂದರ್ಭದಲ್ಲಿ ಕಾಮಗಾರಿ ವೀಕ್ಷಿಸಲು ಬರುತ್ತಿದ್ದ ಟಿಪ್ಪು ಸುಲ್ತಾನ್ ಇಲ್ಲಿ ನಮಾಜ್ ನಿರ್ವಹಿಸುತ್ತಿದ್ದರು ಎಂದು ಪ್ರತಿಪಾದಿಸುತ್ತಾರೆ.

ಜನ ವಸತಿ ಪ್ರದೇಶವಾಗಿತ್ತು:
ಈ ಪ್ರದೇಶ ಜನ ವಸತಿಯಿಂದ ಕೂಡಿತ್ತು ಎಂದು ಹೇಳಲು ಕಂಡುಬರುವ ಅಂಶ ಗಳೆಂದರೆ ಸುತ್ತಮುತ್ತಲಿನ ಖಬರಸ್ಥಾನ್‍ಗಳು. ಈ ದರ್ಗಾದಲ್ಲಿರುವ ಗೊರಿಗಳು. ಸುಮಾರು ಅರ್ದ ಕಿ ಮೀ ದೂರದಲ್ಲಿ ಅತೇಶವಲಿ ಎಂಬ ದರ್ಗಾವಿದೆ. ಈ ಪ್ರದೇಶದಲ್ಲೂ ಸಹ ಅನೇಕ ಗೋರಿಗಳಿವೆ ಮತ್ತು ಹೆದ್ದಾರಿ ಸಮೀಪ ಅಂದರೆ ದರ್ಗಾದಿಂದ ಸುಮಾರು 300 ಮೀಟರ್ ದೂರದಲ್ಲಿ ಒಂದು ಖಬರಸ್ಥಾನ್ ಇದೆ, ಈ ಖಬರಸ್ಥಾನ್ ಪುರಾತನ ಖಬರಸ್ಥಾನ್ ಆಗಿದ್ದು ಇತ್ತೀಚಿಗೆ ಸ್ಥಳಿಯ ನಿವಾಸಿಗಳನ್ನು ಧಫನ್ ಮಾಡುತ್ತಿದ್ದರು.
ಈ ಎಲ್ಲಾ ಖಬರಸ್ಥಾನ್‍ಗಳು ಈ ಪ್ರದೇಶದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು ಎಂಬು ಪುರಾವೆ ವದಗಿಸುತ್ತದೆ. ಆದರೆ ಇಲ್ಲಿ ಜನ ವಸತಿ ಪ್ರದೇಶದ ಪಳಿಯುಳಿಕೆಗಳು ಇಲ್ಲಿ ಕಂಡುಬರುವುದಿಲ್ಲ.

ಈ ಪ್ರದೇಶದ ಪಿತಾಮಹ  ಶಾ ಸಾಬ್:
ಇವರ ಪೂರ್ಣ ಹೆಸರು ಅಬ್ದುಲ್ ಮಜೀದ್ ಶಾ ಖಾದ್ರಿ ಇಲ್ಲಿಯ ಜನ ಶಾ ಸಾಬ್ ಎಂದು ಕರೆಯುತ್ತಿದ್ದರು. ಈ ಸ್ಥಳ ಟಿಪ್ಪು ಸುಲ್ತಾನ್ ಆಳ್ವಿಕೆಯ ನಂತರ ಮಂಜ್ರಾಬಾದ್ ದರ್ಗಾ ಕೆಲವು  ಸ್ಧಳಿಯರ ಜನರ ಸಂರಕ್ಷಣೆಯಲ್ಲಿ ನಡೆದು ಬಂದಿತ್ತು ಈ ಸ್ಥಳವನ್ನು ಅಭಿವೃದ್ದಿ ಪಡಿಸಿದ ಕೀರ್ತಿ ದಿವಂಗತ ಶಾ ಸಾಬ್ ರವರಿಗೆ ಸಲ್ಲುತ್ತದೆ,

ಇಲ್ಲಿಯ ಹಿರಿಯ ನಾಗರೀಕರು ಹೇಳುವಂತೆ ಶಹಾ ಸಾಬ್  ಈ ಸ್ಥಳದಲ್ಲಿ ವಾಸಿಸುವ ಮೂಲಕ ತಾಲ್ಲೂಕಿನ ಪ್ರಮುಖ ಸ್ಥಳವಾಗಿಸಿದರು ಎನ್ನುತ್ತಾರೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಧಿಯವರು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಈ ಮಾರ್ಗವಾಗಿ ಸಂಚರಿಸುವಾಗ ಈ ದರ್ಗಾಕ್ಕೆ ಬೇಟಿನೀಡಿದ್ದರು.

ಶಾ ಸಾಬ್ ರವರು ಇಂದಿರಾಗಾಂಧಿಯವರನ್ನು ಆರ್ಶಿವಾದಿಸಿ ನಿಮಗೆ ಗೆಲವು ಖಂಡಿತ ಎಂದು ಹೇಳುವ ಮೂಲಕ ಆತ್ಮ ಸ್ಥರ್ಯ ನೀಡಿದ್ದರು.  ಇಂದಿರಾಗಾಧಿಯವರು ಈ ಸ್ಥಳದ ಬಗ್ಗೆ ಪ್ರಭಾವಿತರಾಗಿದ್ದರು ಎಂದು ಜನ ಮಾತನಾಡಿಕೊಳ್ಳುತ್ತಾರೆ.
ಶಾ ಸಾಬ್ ಮೂಲ ತಮಿಳುನಾಡಿನವರಾಗಿದ್ದಾರೆ. ಸಕಲೇಶಪುರಕ್ಕೆ ವಲಸೆ ಬಂದ ಇವರು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಶಾಲೆಗಳಲ್ಲಿ ಮ್ಯಾಜಿಕ್  ಪ್ರದರ್ಶನ ಮಾಡುತ್ತಿದ್ದರು ಎಂದು ಹೇಳಲಾಗುತ್ತದೆ.

ದರ್ಗಾ ಪ್ರದೇಶದಲ್ಲಿ ಮುಖಾಂ ಹೋಡಿದನಂತರ ಸ್ಥಳಿಯ ಜನರಲ್ಲಿ ವಿಶ್ವಾಸಗಳಿಸಿ ಸಮಿತಿ ರಚಿಸಿದರು. ಸರ್ವ ಧರ್ಮಿಯರು ಈ ಪ್ರದೇಶದ ಅಭಿವೃದ್ದಿಗೆ ಶ್ರಮಿಸಿದ್ದರು. ದೋಣಿಗಾಲ್, ಆನೆಮಹಾಲ್, ಕಲ್ಗಣೆ ಗ್ರಾಮದ ಸರ್ವಜನಾಂಗದ ನೆರವಿನೊಂದಿಗೆ ಉರೂಸ್ ಆಚರಿಸುತ್ತಿದ್ದರು.1978ರಲ್ಲಿ ಪ್ರಥಮಬಾರಿಗೆ ಅದ್ದೂರಿಯಾಗಿ ಉರೂಸ್ ಆಚರಿಸಿದರು.
ಶಹಾ ಸಾಬ್ ರವರು ರಂದು ನಿಧನರಾದರು  ತನ್ನ ಜೀವಿತಾವಧಿಯಲ್ಲಿ  ಮಂಜ್ರಬಾದ್ ದರ್ಗಾವನ್ನು ವಕ್ವ್ ಸಂಸ್ಥೆಗೆ ನೊಂದಾಯಿಸಿದ್ದರು.

ಆರು ಅಡಿ ಎತ್ತರದ ಶ ಸಾಭ್ ಕಪ್ಪು ಬಣ್ಣದ ಉಡುಪು ದರಿಸುತ್ತಿದ್ದರು, ನೀಳವಾದ ಕೂದಲು ಇವರ ಶೈಲಿಯಾಗಿತ್ತು. ನಂತರ ಕೇಸರಿ ಮತ್ತು ಹಸಿರು ಬಣ್ಣದ ಉಡುಪು ದರಿಸಲಾರಂಬಿಸಿದರುದ್ದರು.
ಹಜ್ ಯಾತ್ರೆಯ ನಂತರ ಅನಾರೋಗ್ಯಕ್ಕೆ ತುತ್ತಾಗಿ ನಿಧನ ಹೊಂದಿದರು. ಇವರನ್ನು ದರ್ಗಾದ ಹಿಂಬಾಗದಲ್ಲಿ ಧಫನ್ ಮಾಡಲಾಗಿದೆ.

ಸೂಫಿ ಶೈಲಿಯಲ್ಲಿ ಜೀವನ ನಡೆಸುತ್ತಿದ್ದ ಶ ಸಾಬ್ ಇಲ್ಲಿಯ ಜನರಲ್ಲಿ ದಂತ ಕಥೆಯಾಗಿದ್ದಾರೆ  ಜನ ಇವರ ಪವಾಡದ ಬಗ್ಗೆ ಮಾತನಾಡುತ್ತಾರೆ. ಆದರೆ ಇವರು ತನ್ನ ಜೀವಿತಾವಧಿಯಲ್ಲಿ ತನ್ನನು ಪವಾಡ ಪುರುಶ ಎಂದು ಬಿಂಬಿಸಿಕೊಳ್ಳದೆ ಸರಳ ಜೀವನನಡೆಸುತ್ತ ಅನಾಥ ಮತ್ತು ನಿರ್ಗತಿಕ ಮಕ್ಕಳ ಪಾಲನೆಯಲ್ಲಿ ಆದರ್ಶವಾಗಿ ಅಂತ್ಯ ಕಂಡರು.ವಕ್ವ್ ಆಡಳಿತಕ್ಕೆ ಒಳಪಡುವ ಈ ಸಂಸ್ಥೆಯನ್ನು ಸ್ಥಳಿಯರು ಸಮಿತಿಯನ್ನು ರಚಿಸಿ ಸೇವೆ ಸಲ್ಲಿಸುತ್ತಿದ್ದಾರೆ.
# ಮಲ್ನಾಡ್ ಮೆಹಬೂಬ್